ADVERTISEMENT

ಇಂದು ಜಾರ್ಖಂಡ್‌ನ ಇಂಡಿಯಾ ಬಣದ ಶಾಸಕರ ಸಭೆ:ಮತ್ತೆ ಸಿಎಂ ಆಗ್ತಾರಾ ಹೇಮಂತ್ ಸೊರೇನ್?

ಪಿಟಿಐ
Published 3 ಜುಲೈ 2024, 7:30 IST
Last Updated 3 ಜುಲೈ 2024, 7:30 IST
ಹೇಮಂತ್ ಸೊರೇನ್
ಹೇಮಂತ್ ಸೊರೇನ್   

ರಾಂಚಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಊಹಾಪೋಹಗಳ ನಡುವೆ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಇಂದು ಇಂಡಿಯಾ ಬಣದ ಶಾಸಕರ ಮಹತ್ವದ ಸಭೆ ನಡೆಸಲಿದ್ದಾರೆ ಎಂದು ಮೈತ್ರಿಕೂಟದ ಶಾಸಕರೊಬ್ಬರು ತಿಳಿಸಿದ್ಧಾರೆ.

ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪಕ್ಷದ ಕಾರ್ಯಾಧ್ಯಕ್ಷರಾದ ಸೊರೇನ್, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಐದು ತಿಂಗಳು ಜೈಲುವಾಸದ ಬಳಿಕ ಜೂನ್ 28ರಂದು ಹೈಕೋರ್ಟ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಸಾಧ್ಯತೆ ಇದೆ. ಈ ಸಭೆ ಅತ್ಯಂತ ಪ್ರಮುಖವಾದದ್ದು. ಮೈತ್ರಿಕೂಟದ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ’ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ನಡುವೆ ಮುಖ್ಯಮಂತ್ರಿ ಚಂಪೈ ಸೊರೇನ್ 1,500 ಶಿಕ್ಷಕರಿಗೆ ನೇಮಕಾತಿ ಪತ್ರ ವಿತರಣೆ ಸೇರಿದಂತೆ ತಮ್ಮ ಎಲ್ಲ ಪ್ರಮುಖ ಕಾರ್ಯಕ್ರಮಗಳನ್ನು ರದ್ದು ಮಾಡಿರುವುದು ನಾಯಕತ್ವ ಬದಲಾವಣೆಯ ಊಹಾಪೋಹಕ್ಕೆ ಇಂಬು ನೀಡಿದೆ.

ಜಾರ್ಖಂಡ್‌ನ 12ನೇ ಮುಖ್ಯಮಂತ್ರಿಯಾಗಿ ಫೆಬ್ರುವರಿ 2ರಂದು ಪ್ರಮಾಣವಚನ ಸ್ವೀಕರಿಸಿದ್ದ ಚಂಪೈ ಸೊರೇನ್, ಇಂದು ಸಹ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ.

‘ಮುಂಬರುವ ಜಾರ್ಖಂಡ್ ವಿಧಾನಸಭೆ ಚುನಾವಣೆ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ನಮ್ಮನ್ನು ಸಭೆಗೆ ಆಹ್ವಾನಿಸಲಾಗಿದೆ. ಚುನಾವಣೆಯಲ್ಲಿ ಗೆಲುವಿನ ಉತ್ತಮ ಕಾರ್ಯತಂತ್ರ ರೂಪಿಸುವುದು ಮಹತ್ವದ್ದಾಗಿದೆ’ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ್ದಾರೆ.

ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ಮತ್ತು ರಾಜ್ಯ ಘಟಕದ ಅಧ್ಯಕ್ಷ ರಾಜೆಶ್ ಠಾಕೂರ್ ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸುವುದೇ ಸಭೆಯ ಕಾರ್ಯಸೂಚಿಯಾಗಿದೆ ಎಂದು ಜೆಎಂಎಂ ವಕ್ತಾರ ಮನೋಜ್ ಪಾಂಡೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.