ನವದೆಹಲಿ:ವಿದ್ಯುನ್ಮಾನ ಮತಯಂತ್ರ (ಇವಿಎಂ) ಹ್ಯಾಕಿಂಗ್ ಬಗ್ಗೆ ತಿಳಿದಿದ್ದರಿಂದ ಕೇಂದ್ರದ ಮಾಜಿ ಸಚಿವ ಗೋಪಿನಾಥ್ ಮುಂಡೆ ಅವರನ್ನು ಹತ್ಯೆ ಮಾಡಲಾಗಿತ್ತು ಎಂದುಅಮೆರಿಕ ಮೂಲದ ಸೈಬರ್ ತಜ್ಞ ಸಯೀದ್ ಶುಜಾ ಹೇಳಿದ ಬೆನ್ನಲ್ಲೇ ಮುಂಡೆ ಅವರ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರ ಅಳಿಯ ಧನಂಜಯ್ ಮುಂಡೆ ಆಗ್ರಹಿಸಿದ್ದಾರೆ.
2014 ಜೂನ್‍ನಲ್ಲಿ ದೆಹಲಿಯಲ್ಲಿ ರಸ್ತೆ ಅಪಘಾತದಲ್ಲಿಗೋಪಿನಾಥ್ ಮುಂಡೆ ಮೃತಪಟ್ಟಿದ್ದರು. ಸಾವಿನ ಹಿಂದೆ ಯಾವುದೇ ಸಂಚಿಲ್ಲ. ಅಪಘಾತದಿಂದ ಉಂಟಾದ ಗಾಯಗಳಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಸಿಬಿಐ ಹೇಳಿತ್ತು. ಆದರೆ, 2014ರ ಚುನಾವಣೆಯಲ್ಲಿ ಇವಿಎಂ ದುರ್ಬಳಕೆಯಾಗಿದೆ ಎಂದು ಹೇಳಿದಶುಜಾ, ಇವಿಎಂ ಹ್ಯಾಕ್ ಬಗ್ಗೆ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಅವರಿಗೆ ತಿಳಿದಿತ್ತು.ಹಾಗಾಗಿ ಅವರನ್ನು ಹತ್ಯೆ ಮಾಡಲಾಯಿತು ಎಂದು ಹೇಳಿದ್ದಾರೆ.
ಗೋಪಿನಾಥ್ ಮುಂಡೆ ಅವರನ್ನು ಯಾರೆಲ್ಲ ಪ್ರೀತಿಸುತ್ತಿದ್ದರೋ ಅವರೆಲ್ಲ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ನಿಜವಾಗಿಯೂ ಅಪಘಾತ ನಡೆದಿದೆಯೇ ಅಥವಾ ಸಂಚು ಹೂಡಲಾಗಿತ್ತೇ ಎಂದು ಶಂಕಿಸಿದ್ದರು. ಸಯೀದ್ ಶುಜಾ ಹೇಳಿಕೆ ಆಘಾತಕಾರಿಯಾದದ್ದು ಎಂದುಮಹಾರಾಷ್ಟ್ರ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕರೂ ಆಗಿರುವ ಧನಂಜಯ್ ಹೇಳಿದ್ದಾರೆ.
‘ಗೋಪಿನಾಥ್ ಮುಂಡೆ ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ಸೈಬರ್ ತಜ್ಞರೊಬ್ಬರು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ತಕ್ಷಣ ಗಮನಹರಿಸಬೇಕು. ಇದು ಸಮೂಹ ನಾಯಕರೊಬ್ಬರ ಸಾವಿಗೆ ನೇರವಾಗಿ ಸಂಬಂಧವುಳ್ಳ ವಿಚಾರವಾದ್ದರಿಂದ ರಾ ಸಂಸ್ಥೆ ಅಥವಾ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆಯಾಗಬೇಕು’ ಎಂದು ಧನಂಜಯ್ ಮುಂಡೆ ಟ್ವೀಟ್ ಮಾಡಿದ್ದಾರೆ.
‘ಮುಂಡೆ ಅವರ ನಾಯಕತ್ವವನ್ನು ಹಿಂಬಾಲಿಸಿದ್ದ ಮತ್ತು ಅವರನ್ನು ಪ್ರೀತಿಸಿದ್ದ ಎಲ್ಲರೂ ಅವರ ಸಾವಿನ ಬಗ್ಗೆ ಪ್ರಶ್ನಿಸಿದ್ದರು. ಸೈಬರ್ ತಜ್ಞ ಬಹಿರಂಗಪಡಿಸಿರುವ ಮಾಹಿತಿಯಿಂದ ಅನುಮಾನ ನಿಜವಾಗಿದೆ. ಇವಿಎಂ ಹ್ಯಾಕ್ ಮಾಡಲಾಗಿತ್ತು ಎಂಬ ಆರೋಪ ನಿಜವಾದರೆ ವಿಶ್ವದ ಅತಿದ ದೊಡ್ಡ ಪ್ರಜಾಪ್ರಭುತ್ವದ ನಿಯಮಗಳ ಉಲ್ಲಂಘನೆಯಾದಂತೆಯೇ’ ಎಂದೂ ಧನಂಜಯ್ ಹೇಳಿದ್ದಾರೆ.
ಮುಂಡೆ ಅವರ ಸಾವಿನ ಬಗ್ಗೆ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿ ತಂಜಿಲ್ ಅಹ್ಮದ್ ಸಚಿವರ ಹತ್ಯೆಯಾಗಿದೆ ಎಂದು ಎಫ್‌ಐಆರ್ ದಾಖಲಿಸಲು ಮುಂದಾಗಿದ್ದರು. ಆದರೆ, ಅವರೇ ಹತ್ಯೆಯಾದರು ಎಂದೂಶುಜಾ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.