ಇಡುಕ್ಕಿ: ‘ರಾಹುಲ್ ಗಾಂಧಿ ಅವಿವಾಹಿತ ಕಷ್ಟ ತಂದೊಡ್ಡುವವವರಾಗಿದ್ದು, ಹೆಣ್ಣು ಮಕ್ಕಳು ಅವರ ಮುಂದೆ ಎಂದಿಗೂ ಭಾಗಬಾರದು’ ಎಂದು ಎಡಪಕ್ಷ ಬೆಂಬಲಿತ ಮಾಜಿ ಸಂಸದ ಜಾಯ್ಸ್ ಜಾರ್ಜ್ ಹೇಳಿರುವುದು ಕೇರಳದಲ್ಲಿ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕರು ಜಾರ್ಜ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಇಡುಕ್ಕಿ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಿಪಿಐ ಬೆಂಬಲದೊಂದಿಗೆ ಜಯಗಳಿಸಿದ್ದ ಜಾರ್ಜ್ ಅವರು, ಸೋಮವಾರ ಇರಟ್ಟಾಯರ್‌ನಲ್ಲಿ ನಡೆದ ವಿಧಾನಸಭಾ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿ, ರಾಹುಲ್ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು.
ರಾಹುಲ್ ಗಾಂಧಿ ಅವರು ಮಹಿಳಾ ಕಾಲೇಜುಗಳಿಗೆ ಮಾತ್ರ ಭೇಟಿ ನೀಡುತ್ತಾರೆ. ಹಾಗಾಗಿ ಮಾಜಿ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ವ್ಯವಹರಿಸುವಾಗ ವಿದ್ಯಾರ್ಥಿನಿಯರು ‘ಜಾಗರೂಕರಾಗಿರಬೇಕು’ ಎಂದು ಅವರು ಹೇಳಿದ್ದರು.
ಜಾರ್ಜ್ ಅವರ ಈ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ರಾಹುಲ್ ಗಾಂಧಿ ವಿರುದ್ಧ ವೈಯಕ್ತಿವಾಗಿ ದಾಳಿ ಮಾಡುವುದು ಎಲ್‌ಡಿಎಫ್‌ನ ನಿಲುವಲ್ಲ’ ಎಂದಿದ್ದಾರೆ.
ಇತ್ತೀಚೆಗೆ ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಬಂದಿದ್ದ ರಾಹುಲ್ ಗಾಂಧಿ ಅವರು, ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ಕೊಚ್ಚಿಯ ಪ್ರಸಿದ್ಧ ಸೇಂಟ್ ತೆರೇಸಾ ಕಾಲೇಜಿನಲ್ಲಿ 'ಐಕಿಡೊ' ಪಾಠ ಹೇಳಿಕೊಟ್ಟು, ಸಂವಾದ ನಡೆಸಿದ್ದರು. ಇದಾಗಿ ಕೆಲ ದಿನಗಳ ಬಳಿಕ ಮಾಜಿ ಸಂಸದರು ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದಾರೆ.
ಜಾರ್ಜ್ ಅವರ ಹೇಳಿಕೆಯನ್ನು ವಿರೋಧಿಸಿರುವ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಾಲ, ಇದು ‘ದುರಾದೃಷ್ಟಕರ ಮತ್ತು ಸ್ವೀಕಾರಾರ್ಹವಲ್ಲ’ ಎಂದಿದ್ದಾರೆ. ಮಾಜಿ ಸಂಸದರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ಡೀನ್ ಕುರಿಯಾಕೋಸ್ ಆಗ್ರಹಿಸಿದ್ದಾರೆ.
ಜಾರ್ಜ್ ಅವರು, ರಾಹುಲ್ ಗಾಂಧಿಯನ್ನು ಮಾತ್ರವಲ್ಲದೆ ವಿದ್ಯಾರ್ಥಿನಿಯರನ್ನೂ ಅವಮಾನಿಸಿದ್ದಾರೆ. ಈ ಸಂಬಂಧ ಅವರ ವಿರುದ್ಧ ಶೀಘ್ರದಲ್ಲೇ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿಯೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.