ADVERTISEMENT

ಶಿವರಾಜ್‌ ಸಿಂಗ್‌ ಪುತ್ರನ ಹೇಳಿಕೆಗೆ ಕಾಂಗ್ರೆಸ್‌ ಟೀಕೆ

ನನ್ನ ತಂದೆಗೆ ದೆಹಲಿಯೇ ತಲೆಬಾಗುತ್ತದೆ’: ಕಾರ್ತಿಕೇಯ ಸಿಂಗ್‌

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 15:40 IST
Last Updated 22 ಜೂನ್ 2024, 15:40 IST
ಶಿವರಾಜ್‌ ಸಿಂಗ್‌ ಚೌಹಾಣ್
ಶಿವರಾಜ್‌ ಸಿಂಗ್‌ ಚೌಹಾಣ್   

ಭೋಪಾಲ್(ಪಿಟಿಐ): ‘ಭಾರಿ ಮತಗಳಿಂದ ಗೆಲುವು ಸಾಧಿಸಿರುವ ನನ್ನ ತಂದೆಗೆ ಇಡೀ ದೆಹಲಿಯೇ ತಲೆಬಾಗುತ್ತದೆ. ದೆಹಲಿ ಅವರನ್ನು ಗುರುತಿಸುತ್ತದೆ, ಅವರನ್ನು ಗೌರವಿಸುತ್ತದೆ’ ಎಂಬ, ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಅವರ ಪುತ್ರನ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಮಧ್ಯಪ್ರದೇಶದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌, ಈ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಟೀಕಾಪ್ರಹಾರ ಮಾಡಿದೆ.

ಚೌಹಾಣ್‌ ಪುತ್ರ ಕಾರ್ತಿಕೇಯ ಸಿಂಗ್‌ ಅವರು ಸೆಹೋರ್‌ ಜಿಲ್ಲೆಯ ಬುಧ್ನಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭೇರುಂಡಾ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ನೀಡಿರುವ ಹೇಳಿಕೆ, ಈಗ ಟೀಕೆಗೆ ಗುರಿಯಾಗಿದೆ.

ADVERTISEMENT

‘ಈಗಷ್ಟೆ ನಾನು ದೆಹಲಿಯಿಂದ ಮರಳಿದ್ದೇನೆ. ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ ದೆಹಲಿಯಲ್ಲಿ ಜನಪ್ರಿಯರಾಗಿದ್ದರು. ಈಗ ಮುಖ್ಯಮಂತ್ರಿ ಅಲ್ಲ. ಆದರೂ, ಅವರು ಹೆಚ್ಚು ಜನಪ್ರಿಯರಾಗಿರುವುದು ಏಕೆ ಎಂದು ನನಗೆ ತಿಳಿಯುತ್ತಿಲ್ಲ’ ಎಂದು ಕಾರ್ತಿಕೇಯ ಸಿಂಗ್‌ ಹೇಳಿದ್ದಾರೆ.

‘ದೆಹಲಿಯಲ್ಲಿ ಮಾತ್ರವಲ್ಲ, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಉನ್ನತ ನಾಯಕರನ್ನು ಗಣನೆಗೆ ತೆಗೆದುಕೊಂಡಲ್ಲಿ, ನಮ್ಮ ನಾಯಕರಾದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ’ ಎಂದೂ ಹೇಳಿದ್ದಾರೆ. ಕಾರ್ತಿಕೇಯ ಸಿಂಗ್ ಅವರು ಅಮೆರಿಕದ ಪೆನ್‌ಸಿಲ್ವೇನಿಯಾ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ.

ಈ ವಿಚಾರ ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಜಿತು ಪಟವಾರಿ ಅವರು ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.

‘ದೆಹಲಿ ನಾಯಕರು ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಹೆದರುತ್ತಾರೆ ಎಂದು ಇದರರ್ಥ. ಇದು ಪಕ್ಷದಲ್ಲಿನ ಭಿನ್ನಮತ ಕುರಿತ ಭಯವನ್ನು ತೋರಿಸುತ್ತದೆ’ ಎಂದು ಪಟವಾರಿ ಕುಟುಕಿದ್ದಾರೆ.

‘ಶಿವರಾಜ್‌ ಸಿಂಗ್‌ ಅವರ ಯುವರಾಜ ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ಭಯದಲ್ಲಿರುವ ಸರ್ವಾಧಿಕಾರಿಯನ್ನು ಇಡೀ ದೇಶವೇ ಗಮನಿಸುತ್ತಿದೆ’ ಎಂದೂ ಅವರು ಹೇಳಿದ್ದಾರೆ.

ಜಿತು ಪಟವಾರಿ (ಬಲಗಡೆಯವರು) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.