ಮುಂಬೈ: ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಮುಂಬೈ ವಲಯದ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಅವರು ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಮಾದಕ ದ್ರವ್ಯ ವಿರೋಧಿ ಸಂಸ್ಥೆಯ ಹಿರಿಯ ಅಧಿಕಾರಿ ವಿರುದ್ಧ ತಾನು ಸಲ್ಲಿಸಿದ್ದ ದೂರಿಗೆ ಇದು ‘ಪ್ರತೀಕಾರ’ದ ಕ್ರಮವಾಗಿದೆ. ಇ.ಡಿ.ಯು ತಮ್ಮ ವಿರುದ್ಧ ‘ದುರುದ್ದೇಶದಿಂದ ಸೇಡು ತೀರಿಸಿಕೊಳ್ಳುತ್ತಿದೆ’ ಎಂದು ಆರೋಪಿಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರೂಖ್‌ಖಾನ್ ಪುತ್ರ ಆರ್ಯನ್ ಖಾನ್ ಹೆಸರು ಸೇರಿಸದಿರಲು ₹ 25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಿಬಿಐ, ವಾಂಖೆಡೆ ವಿರುದ್ಧ ಎಫ್ಐಆರ್ ದಾಖಲಿಸಿತ್ತು.
‘ಇ.ಡಿ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸಬೇಕು. ಯಾವುದೇ ದಬ್ಬಾಳಿಕೆಯ ಕ್ರಮದಿಂದ ವಾಂಖೆಡೆ ಅವರಿಗೆ ರಕ್ಷಣೆ ನೀಡುವ ಮಧ್ಯಂತರ ಆದೇಶ ಜಾರಿಗೊಳಿಸಬೇಕು’ ಎಂದು ವಕೀಲರಾದ ಕರಣ್ ಜೈನ್, ಸ್ನೇಹಾ ಸನಾಪ್ ಮತ್ತು ಆದಿತ್ಯ ತಾರ್ಗೆ ಅವರು ಫೆ. 6ರಂದು ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.
‘ಸಿಬಿಐ ವಿರುದ್ಧದ ಅರ್ಜಿಯ ವಿಚಾರಣೆ ನಡೆದು, ತೀರ್ಪು ಪ್ರಕಟಗೊಳ್ಳುವವರೆಗೂ ಇ.ಡಿ ತನಿಖೆಯನ್ನು ತಡೆಹಿಡಿಯಬೇಕು’ ಎಂದು ವಾಂಖೆಡೆ ಕೋರಿದ್ದಾರೆ.
ಸಿಬಿಐ ಹಾಗೂ ಇ.ಡಿ ಪ್ರಕರಣದ ವಿರುದ್ಧದ ಎರಡು ಅರ್ಜಿಗಳು ನ್ಯಾಯಮೂರ್ತಿ ಪಿ.ಡಿ.ನಾಯ್ಕ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಫೆ. 15ರಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.