ನವದೆಹಲಿ: ಖಲಿಸ್ತಾನಿಗಳ ಪರ ಗುಂಪಿನಿಂದ ಬೆದರಿಕೆ ಇದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ರಾಷ್ಟ್ರೀಯ ತನಿಖಾ ದಳ (NIA)ದ ನಿವೃತ್ತ ಮಹಾನಿರ್ದೇಶಕ ದಿನಕರ್ ಗುಪ್ತಾ ಅವರಿಗೆ ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿದೆ.
1987ರ ಐಪಿಎಸ್ ತಂಡದ ಅಧಿಕಾರಿಯಾದ ದಿನಕರ್ ಅವರು ಪಂಜಾಬ್ ಪೊಲೀಸ್ ಮಹಾ ನಿರ್ದೇಶಕರಾಗಿದ್ದರು. ಏಪ್ರಿಲ್‌ನಲ್ಲಿ ಇವರು ಸೇವಾ ನಿವೃತ್ತಿ ಹೊಂದಿದ್ದರು.
ಇವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸುವ ಹೊಣೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಅತಿ ಗಣ್ಯ ವ್ಯಕ್ತಿಗಳಿಗೆ ಭದ್ರತೆ ಒದಗಿಸುವ ವಿಭಾಗಕ್ಕೆ ವಹಿಸಲಾಗಿದೆ. 40 ಸಿಆರ್‌ಪಿಎಫ್ ಯೋಧರು ಇವರ ರಕ್ಷಣೆಗೆ ನಿಯೋಜನೆಗೊಂಡಿದ್ದಾರೆ. ಇವರು ಪಾಳಿಯ ಪ್ರಕಾರ ಕೆಲಸ ಮಾಡಲಿದ್ದಾರೆ.
ಕೇಂದ್ರ ಗುಪ್ತಚರ ಹಾಗೂ ಭದ್ರತಾ ಇಲಾಖೆ ನೀಡಿದ ವರದಿಯಲ್ಲಿ ಗುಪ್ತಾ ಅವರಿಗೆ ಅಪಾಯ ಇರುವುದನ್ನು ಉಲ್ಲೇಖಿಸಲಾಗಿತ್ತು. ಎನ್‌ಐಎದಲ್ಲಿದ್ದಾಗ ಅವರು ನಿರ್ವಹಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತು ಪಂಜಾಬ್ ಪೊಲೀಸ್ ಮುಖ್ಯಸ್ಥರಾಗಿದ್ದಾಗಿನ ಅವಧಿಯಲ್ಲಿ ಅವರು ಕೈಗೊಂಡ ಕಾರ್ಯಗಳಿಗೆ ಸಂಬಂಧಿಸಿದಂತೆ ಖಲಿಸ್ತಾನ ಪರ ಸಂಘಟನೆಗಳು ಹಾಗೂ ಬೆಂಬಲಿಗರಿಂದ ಬೆದರಿಕೆ ಇದ್ದು, ಅವರಿಗೆ ಉನ್ನತ ಮಟ್ಟದ ಭದ್ರತೆ ಒದಗಿಸುವಂತೆಯೂ ವರದಿಯಲ್ಲಿ ಹೇಳಲಾಗಿತ್ತು.
ಇದೇ ಮಾದರಿಯ ಭದ್ರತೆಯನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೂ ಕೇಂದ್ರ ಸರ್ಕಾರ ನೀಡಿದೆ. ರಾ ಮುಖ್ಯಸ್ಥ ಸಮಂತ್ ಗೋಯಲ್ ಅವರಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ಝಡ್ ಶ್ರೇಣಿಯ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ.
ವ್ಯಕ್ತಿಗಳಿಗೆ ಇರುವ ಬೆದರಿಕೆಗೆ ಅನುಗುಣವಾಗಿ ಝಡ್ ಪ್ಲಸ್, ಝಡ್, ವೈ ಪ್ಲಸ್, ವೈ ಹಾಗೂ ಎಕ್ಸ್ ಶ್ರೇಣಿಯ ಭದ್ರತೆಯನ್ನು ಕೇಂದ್ರ ಸರ್ಕಾರ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.