ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ನಾಯಕರ ಜತೆಗಿನ ತಮ್ಮ ವೈಯಕ್ತಿಕ ಸಂಬಂಧವನ್ನು ಅತಿಯಾಗಿ ಬಳಸಿಕೊಳ್ಳುತ್ತಾರೆ ಮತ್ತು ಅದನ್ನು ನಿಜ ಎಂದು ಭಾವಿಸುತ್ತಾರೆ. ಇದು ಅಸಂಬಂದ್ಧ. ಏಕೆಂದರೆ ರಾಷ್ಟ್ರೀಯ ಹಿತಾಸಕ್ತಿಗಳು ಕಡುಸತ್ಯವನ್ನು ಆಧರಿಸಿರುತ್ತವೆಯೇ ಹೊರತು, ವೈಯಕ್ತಿಕ ಸಂಬಂಧವನ್ನಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತಮ್ಮ ಆತ್ಮಕಥೆಯ ನಾಲ್ಕನೇ ಸಂಚಿಕೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಣವ್ ಅವರು 2020ರ ಆಗಸ್ಟ್ 31ರಂದು ನಿಧನರಾಗಿದ್ದಾರೆ. ಆದರೆ ಅವರು ಅನಾರೋಗ್ಯದ ಕಾರಣ ಆಸ್ಪತ್ರೆ ಸೇರುವುದಕ್ಕೂ ಕೆಲವು ದಿನ ಮೊದಲು ತಮ್ಮ ಆತ್ಮಕಥೆಯ ನಾಲ್ಕನೇ ಸಂಚಿಕೆಯ ಕರಡನ್ನು ಅಂತಿಮಗೊಳಿಸಿದ್ದರು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿನೊ ಅಬೆ ಅವರ ಬಗ್ಗೆ ವಿವರಿಸುವಾಗ ಈ ಮಾತು ಹೇಳಿದ್ದಾರೆ. ಪ್ರಣವ್ ಅವರು ತಮ್ಮ ಹೇಳಿಕೆಯನ್ನು ದೀರ್ಘವಾಗಿ ವಿವರಿಸಿದ್ದಾರೆ. ಮೋದಿ ಮತ್ತು ಅಬೆ ಅವರು ತಾವಿಬ್ಬರೂ ಸ್ನೇಹಿತರು ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ.
2014ರಲ್ಲಿ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ರಚನೆ ಆದ ನಂತರ ಭಾರತ ಮತ್ತು ಜಪಾನ್‌ನ ನಡುವಣ ಸಂಬಂಧ ಗಟ್ಟಿಯಾಗಿದೆ ಎಂಬ ಮಾತು ಚಾಲ್ತಿಯಲ್ಲಿದೆ. ಪ್ರಣವ್ ಅವರು ಇದು ಸರಿಯಲ್ಲ ಎಂದು ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ. 'ಮೋದಿ ಅವರು ಪ್ರಧಾನಿ ಆಗುವ ಮೊದಲೇ ಅಬೆ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಹಲವು ಕ್ಷೇತ್ರಗಳಲ್ಲಿ ಭಾರತ ಮತ್ತು ಜಪಾನ್‌ನ ಸಂಬಂಧ ಮೋದಿ ಅಧಿಕಾರಕ್ಕೆ ಬರುವ ಮೊದಲೇ ಗಟ್ಟಿಯಾಗಿತ್ತು' ಎಂದು ಪ್ರಣವ್ ಬರೆದಿದ್ದಾರೆ. 2013ರಲ್ಲಿಎರಡೂ ದೇಶಗಳ ರಕ್ಷಣಾ ಸಹಕಾರದ ಉದ್ದೇಶದಿಂದ ಜಪಾನ್ ದೊರೆ ಅಕಿಹಿತೊ ಮತ್ತು ರಾಣಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭವನ್ನು ವಿವರಿಸುವಾಗ ಪ್ರಣವ್ ಇದನ್ನು ಬರೆದಿದ್ದಾರೆ.
'ಮೋದಿ ಅವರ ಜತೆಗಿನ ಅಬೆ ಅವರ ನಿಕಟ ಸ್ನೇಹದಿಂದ ಭಾರತಕ್ಕೆ ಅನುಕೂಲವಾಗಿರಬಹುದು. ಆದರೆ, ರಾಷ್ಟ್ರೀಯ ಹಿತಾಸಕ್ತಿಯ ವಿಚಾರದಲ್ಲಿ ವೈಯಕ್ತಿಕ ಸಂಬಂಧವು ಲೆಕ್ಕಕ್ಕೇ ಬರುವುದೇ ಇಲ್ಲ ಎಂದು ನಾನು ಬಲವಾಗಿ ನಂಬಿದ್ದೇನೆ. ಏಕೆಂದರೆ ರಾಷ್ಟ್ರೀಯ ಹಿತಾಸಕ್ತಿಗಳು ಕಡುಸತ್ಯಗಳನ್ನು ಆಧರಿಸಿರುತ್ತದೆ' ಎಂದು ಪ್ರಣವ್ ಬರೆದಿದ್ದಾರೆ.
'ಇಬ್ಬರು ನಾಯಕರು ತಮ್ಮ ವೈಯಕ್ತಿಕ ಸ್ನೇಹದ ಬಗ್ಗೆ ಮಾತನಾಡುವುದನ್ನು ನಾನು ವಿರೋಧಿಸುತ್ತೇನೆ. ಏಕೆಂದರೆ ಇದು ಎರಡು ರಾಷ್ಟ್ರಗಳ ನಡುವಣ ಸಂಬಂಧ. ಅಂತರರಾಷ್ಟ್ರೀಯ ಸಂಬಂಧದ ವಿಚಾರಕ್ಕೆ ಬಂದರೆ, ಇಂತಹ ವೈಯಕ್ತಿಕ ಸಂಬಂಧಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವ ಸಂಬಂಧವೂ ವೈಯಕ್ತಿಕವಾಗಿರುವುದಿಲ್ಲ' ಎಂದು ಅವರು ವಿವರಿಸಿದ್ದಾರೆ.
'ಬಾಂಗ್ಲಾದೇಶದ ಜತೆಗಿನ ನನ್ನ ಸಂಬಂಧ ಸಂಪೂರ್ಣ ರಾಜಕೀಯವಾದದ್ದು. ಆದರೆ, ಶೇಖ್ ಹಸೀನಾ ಅವರು ಗಡೀಪಾರಾಗಿದ್ದ ದಿನಗಳಲ್ಲಿ ಅವರೊಂದಿಗಿನ ನನ್ನ ಸಂಬಂಧ ವೈಯಕ್ತಿಕವಾದದ್ದು. ಜವಾಹರ್ ಲಾಲ್ ನೆಹರೂ ಅವರು ಚೀನಾದ ನಾಯಕರ ಜತೆ ಉತ್ತಮ ಸ್ನೇಹ ಹೊಂದಿದ್ದರು. ಚೀನಾದ ಪೀಪಲ್ಸ್ ರಿಪಬ್ಲಿಕ್ ವಿರುದ್ಧ ಬಂಡು ಎದ್ದಿದ್ದ ಹಲವು ನಾಯಕರು ನೆಹರೂ ಅವರ ಸ್ನೇಹಿತರಾಗಿದ್ದರು. ಆದರೂ, 1948ರಲ್ಲಿ ಪೀಪಲ್ಸ್ ರಿಪಬ್ಲಿಕ್ ಚೀನಾವನ್ನು ಅಧಿಕೃತವಾಗಿ ಪರಿಗಣಿಸಿದ ಏಕೈಕ ರಾಷ್ಟ್ರ ಭಾರತ. ಆಗ ಭಾರತವು ರಾಷ್ಟ್ರೀಯ ಹಿತಾಸಕ್ತಿಯನ್ನು ಪರಿಗಣಿಸಿತ್ತೇ ಹೊರತು, ವೈಯಕ್ತಿಕ ಸ್ನೇಹವನ್ನಲ್ಲ' ಎಂದು ಪ್ರಣವ್ ವಿವರಿಸಿದ್ದಾರೆ.
ನೆಹರೂಗೆ ಚೀನಾದಲ್ಲಿ ಅಷ್ಟೆಲ್ಲಾ ಸ್ನೇಹಿತರಿದ್ದರೂ 1964ರಲ್ಲಿ ಅವರು ನಿಧನರಾದಾಗ, ಚೀನಾದ ಪತ್ರಿಕೆಗಳಲ್ಲಿ ಆ ಬಗ್ಗೆ ಸುದ್ದಿಯೇ ಇರಲಿಲ್ಲ ಎನ್ನಬಹುದು. 1964ರ ಮೇ 27ರಂದು ನೆಹರೂ ಅವರ ಮಗಳು ಇಂದಿರಾ ಗಾಂಧಿ ಅವರಿಗೆ ಚೀನಾದಿಂದ ಒಂದು ಸಂತಾಪ ಪತ್ರ ಬಂದಿತ್ತು ಅಷ್ಟೆ ಎಂದು ಪ್ರಣವ್ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.