ಚಂಡೀಗಢ: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಬೆಂಗಾವಲು ವಾಹನದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯು ಈ ಬಾರಿಯ ಲೋಕಸಭೆ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಮಾಡಿರುವ ಸಾಹಸ ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮತ್ತು ಜಲಂಧರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
ಬೆಂಗಾವಲು ಪಡೆಯ ಮೇಲಿನ ದಾಳಿಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಚನ್ನಿ ‘ಚುನಾವಣೆ ಹತ್ತಿರ ಬಂದಾಗಲೆಲ್ಲಾ ಗೆಲುವು ಸಾಧಿಸಲು ಬಿಜೆಪಿಯವರು ಇಂತಹ ಸಾಹಸಗಳನ್ನು ಮಾಡುತ್ತಾರೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಜನರ ಪ್ರಾಣ ಮತ್ತು ದೇಹದೊಂದಿಗೆ ಹೇಗೆ ಆಟವಾಡಬೇಕೆಂದು ಬಿಜೆಪಿಗೆ ಗೊತ್ತಿದೆ’ ಎಂದು ಆರೋಪಿಸಿದ್ದಾರೆ.
ಚನ್ನಿ ಅವರ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಆಕ್ಷೇಪಾರ್ಹ ಹೇಳಿಕೆಯನ್ನು ನೀಡುವ ಮೂಲಕ ದೇಶದ ಸೈನಿಕರನ್ನು ಅವಮಾನಿಸಲಾಗಿದೆ ಮತ್ತು ದೇಶದ ಸೇನೆಯ ಸಾಮರ್ಥ್ಯವನ್ನು ಪ್ರಶ್ನಿಸಲಾಗಿದೆ. ಚನ್ನಿ ಅವರು ಕ್ಷಮೆಯಾಚಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಬೆಂಗಾವಲು ವಾಹನದ ಮೇಲೆ ಶನಿವಾರ ಸಂಜೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.