ADVERTISEMENT

ಬಿಜೆಪಿ ಸೇರಿದ್ದ ಪಶ್ಚಿಮ ಬಂಗಾಳದ ಮಾಜಿ ಸಚಿವ ಶ್ಯಾಮಪ್ರಸಾದ್ ಮುಖರ್ಜಿ ಬಂಧನ

ಪಿಟಿಐ
Published 22 ಆಗಸ್ಟ್ 2021, 9:28 IST
Last Updated 22 ಆಗಸ್ಟ್ 2021, 9:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದ ಮಾಜಿ ಸಚಿವ ಶ್ಯಾಮ್‌ಪ್ರಸಾದ್‌ ಮುಖರ್ಜಿ ಅವರನ್ನು ಸುಮಾರು ₹10 ಕೋಟಿ ಅಕ್ರಮ ಹಣಕಾಸು ವ್ಯವಹಾರ ಆರೋಪದ ಅಡಿಯಲ್ಲಿ ಭಾನುವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಷ್ಣುಪುರದ ಮಾಜಿ ಶಾಸಕರಾದ ಮುಖರ್ಜಿ ಅವರ ಮೇಲೆ 2020 ರಲ್ಲಿ ಅವರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ಇ-ಟೆಂಡರ್ ಮತ್ತು ಇತರೆ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹಣದ ದುರುಪಯೋಗಪಡಿಸಿಕೊಂಡ ಆರೋಪ ಕೇಳಿಬಂದಿತ್ತು. ಈ ಆರೋಪಗಳ ತನಿಖೆಯ ನಂತರ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

'ಬಿಷ್ಣುಪುರದಲ್ಲಿ 9.91 ಕೋಟಿ ರೂಪಾಯಿ ಹಣಕಾಸಿನ ಅವ್ಯವಹಾರದ ಆರೋಪದ ಕುರಿತು ಎಸ್‌ಡಿಪಿಒಯಿಂದ ತನಿಖೆ ನಡೆಸಲಾಗಿದೆ. ತನಿಖೆಯ ವೇಳೆ ಸೂಕ್ತ ಉತ್ತರ ನೀಡುವಲ್ಲಿ ವಿಫಲವಾದ ನಂತರ ಮುಖರ್ಜಿಯನ್ನು ಬಂಧಿಸಲಾಗಿದೆ' ಎಂದು ಬಂಕುರಾ ಎಸ್‌ಪಿ ಧೃತಿಮಾನ್ ಸರ್ಕಾರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ವಿಷ್ಣುಪುರದ ಬಿಜೆಪಿಯ ಸಂಘಟನಾ ಜಿಲ್ಲಾಧ್ಯಕ್ಷ ಸುಜಿತ್ ಅಗಸ್ತಿ ಮಾತನಾಡಿ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನವೇ ಮುಖರ್ಜಿ ಅವರು ಬಿಜೆಪಿಗೆ ಸೇರ್ಪಡೆಯಾದರು. ಆದರೆ, ಅವರು ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಹೇಳಿದ್ದಾರೆ.

'ಈಗ ಮುಖರ್ಜಿ ವಿರುದ್ಧ ಕೇಳಿಬಂದಿರುವ ಆರೋಪಗಳೆಲ್ಲವೂ ಅವರು ತೃಣಮೂಲ ಕಾಂಗ್ರೆಸ್‌ನಲ್ಲಿದ್ದ ಸಮಯದಲ್ಲಿ ನಡೆದವುಗಳು. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡಿದೆಯೇ?' ಎಂದು ಬಿಜೆಪಿ ನಾಯಕ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.