ಭೋಪಾಲ್: ಮಧ್ಯಪ್ರದೇಶದ ವಿಧಾನಸಭೆ ಸ್ಪೀಕರ್ ಆಗಿ ಬಿಜೆಪಿ ಹಿರಿಯ ಮುಖಂಡ ನರೇಂದ್ರ ಸಿಂಗ್ ತೋಮರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತೋಮರ್ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುವ ಪ್ರಸ್ತಾಪ ಮಂಡಿಸಿದರು. ಇದನ್ನು ಮಾಜಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅನುಮೋದಿಸಿದರು.
ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ಮುಖಂಡ ಉಮಂಗ್ ಸಿಂಘಾರ್ ಅವರು ಸಹ ತೋಮರ್ ಆಯ್ಕೆಗೆ ಸಹಮತ ವ್ಯಕ್ತಪಡಿಸಿದರು. ತೋಮರ್ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಹಂಗಾಮಿ ಸ್ಪೀಕರ್ ಗೋಪಾಲ್ ಭಾರ್ಗವ ಅವರು ತೋಮರ್ ಅವರನ್ನು ಸ್ಪೀಕರ್ ಹುದ್ದೆಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.
66 ವರ್ಷದ ತೋಮರ್ 1983ರಲ್ಲಿ ಗ್ವಾಲಿಯರ್ ನಗರಸಭೆ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ತೋಮರ್ ಅವರು ಮಧ್ಯಪ್ರದೇಶದ ಬಿಜೆಪಿಯಲ್ಲಿ ಹಲವು ಉನ್ನತ ಹುದ್ದೆಗಳನ್ನು ನಿರ್ವಹಸಿದ್ದಾರೆ. ಅವರು ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
ಮಧ್ಯಪ್ರದೇಶ ಬಿಜೆಪಿ ಸರ್ಕಾರದಲ್ಲಿ ತೋಮರ್ ಎರಡು ಸಲ ಸಚಿವರಾಗಿದ್ದರು. ಅವರು ಕೇಂದ್ರದ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಈ ಬಾರಿ ಅವರು ದಿಮಾನಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.