ADVERTISEMENT

ಉತ್ತರ ಪ್ರದೇಶ ಲೋಕಸೇವಾ ಆಯೋಗದ ಕಚೇರಿಗೆ ಮುತ್ತಿಗೆ, ಪ್ರತಿಭಟನೆ

ಒಂದೇ ದಿನ, ಒಂದೇ ಪಾಳಿ ಪರೀಕ್ಷೆ ನಡೆಸಲು ಆಗ್ರಹ | ಬಿಜೆಪಿಯದ್ದ ಯುವ ವಿರೋಧಿ ನೀತಿ– ಎಸ್‌ಪಿ ಖಂಡನೆ  

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 23:13 IST
Last Updated 11 ನವೆಂಬರ್ 2024, 23:13 IST
   

ಪ್ರಯಾಗರಾಜ್/ ಲಖನೌ: ‘ರಿವ್ಯೂ ಅಧಿಕಾರಿ’ ಮತ್ತು ‘ಸಹಾಯಕ ರಿವ್ಯೂ ಅಧಿಕಾರಿ’ (ಆರ್‌ಒ–ಎಆರ್‌ಒ) ಹಾಗೂ ನಾಗರಿಕ ಸೇವೆಯ (ಪಿಸಿಎಸ್‌) ಪೂರ್ವಭಾವಿ ಪರೀಕ್ಷೆಗಳನ್ನು ಬೇರೆ ಬೇರೆ ದಿನಗಳಂದು, ಎರಡು, ಮೂರು ಪಾಳಿಗಳಲ್ಲಿ ನಡೆಸುವ ಉತ್ತರ ಪ್ರದೇಶ ಲೋಕಸೇವಾ ಆಯೋಗದ (ಯುಪಿಪಿಎಸ್‌ಸಿ) ನಿರ್ಧಾರವನ್ನು ವಿರೋಧಿಸಿ ಪರೀಕ್ಷಾ ಆಕಾಂಕ್ಷಿಗಳು ಸೋಮವಾರ ಪ್ರಯಾಗರಾಜ್‌ನಲ್ಲಿರುವ ಆಯೋಗದ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಆಯೋಗದ ಪ್ರವೇಶ ದ್ವಾರದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಪ್ರತಿಭಟನಕಾರರು ಪ್ರವೇಶ ದ್ವಾರ ಸಂಖ್ಯೆ 2ರ ಬಳಿ ಬಾರದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ತಡೆದರು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಪರೀಕ್ಷಾ ಆಕಾಂಕ್ಷಿಗಳು ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬ್ಯಾರಿಕೇಡ್‌ಗಳನ್ನು ತಳ್ಳಿ ನುಗ್ಗಿದರು. 

ವಿವಿಧ ಪಾಳಿಗಳಲ್ಲಿ ಪರೀಕ್ಷೆ:

ADVERTISEMENT

ಆರ್‌ಒ–ಎಆರ್‌ಒ ಹುದ್ದೆಗಳ ನೇಮಕಾತಿಗೆ ಡಿಸೆಂಬರ್‌ 22 ಮತ್ತು 23ರಂದು ಮೂರು ಪಾಳಿಗಳಲ್ಲಿ ಹಾಗೂ ಪಿಸಿಎಸ್‌ ಪೂರ್ವಭಾವಿ ಪರೀಕ್ಷೆಯಲ್ಲಿ ಡಿಸೆಂಬರ್‌ 7 ಮತ್ತು 8ರಂದು ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಸುವುದಾಗಿ ಆಯೋಗ ನವೆಂಬರ್‌ 5ರಂದು ಪ್ರಕಟಿಸಿತ್ತು. ಇದಕ್ಕೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. 

‘ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಿಗದಿತ ಪ್ರದೇಶದಲ್ಲಿ ಪ್ರತಿಭಟನೆ ನಡೆಸುವಂತೆ ಪರೀಕ್ಷಾ ಆಕಾಂಕ್ಷಿಗಳು ಮತ್ತು ವಿದ್ಯಾರ್ಥಿಗಳಿಗೆ ಮನವಿ ಮಾಡಲಾಗಿದೆ’ ಎಂದು ನಗರ ಡಿಸಿಪಿ ಅಭಿಷೇಕ್‌ ಭಾರ್ತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.  

ಒಂದೇ ಪಾಳಿಗೆ ಆಗ್ರಹ:

‘ಈ ಮೊದಲಿನಂತೆ ಆಯೋಗವು ಒಂದೇ ಪಾಳಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕು’ ಎಂದು ಪ್ರತಿಭಟನೆಯಲ್ಲಿದ್ದ ಪರೀಕ್ಷಾ ಆಕಾಂಕ್ಷಿ ಅಂಕಿತ್‌ ಪಟೇಲ್‌ ಪ್ರತಿಕ್ರಿಯಿಸಿದರು. 

‘ಎರಡು ದಿನಗಳಲ್ಲಿ ಪರೀಕ್ಷೆ ನಡೆಸುವ ಆಯೋಗದ ನಿರ್ಧಾರ ನಿಯಮಗಳಿಗೆ ವಿರುದ್ಧ’ ಎಂದು ಮತ್ತೊಬ್ಬ ಆಕಾಂಕ್ಷಿ ಮನೋರಮಾ ಸಿಂಗ್‌ ಹೇಳಿದರು.

‘ಆಯೋಗ ಹೊರಡಿಸಿದ್ದ ಅಧಿಸೂಚನೆಯಲ್ಲಿ ಎರಡು ದಿನಗಳಲ್ಲಿ ಪರೀಕ್ಷೆ ನಡೆಸುವುದಾಗಿ ಹೇಳಿಲ್ಲ. ಹೀಗಾಗಿ ಒಂದೇ ದಿನದಲ್ಲಿ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕು ಎಂದು ನಾವು ಬಯಸುತ್ತೇವೆ’ ಎಂದು ಅವರು ತಿಳಿಸಿದರು.

ಎಸ್‌ಪಿ ಖಂಡನೆ:

ಪ್ರತಿಭಟನೆ ಮಾಡುತ್ತಿದ್ದ ಪರೀಕ್ಷಾ ಆಕಾಂಕ್ಷಿಗಳ ವಿರುದ್ಧದ ಪೊಲೀಸರ ವರ್ತನೆಯನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಖಂಡಿಸಿದ್ದಾರೆ. ಅವರು, ರಾಜ್ಯದ ಬಿಜೆಪಿ ಸರ್ಕಾರವು ಯುವ ವಿರೋಧಿ ಮತ್ತು ವಿದ್ಯಾರ್ಥಿ ವಿರೋಧಿಯಾಗಿದೆ ಎಂದು ಆರೋಪಿಸಿದ್ದಾರೆ. 

‘ಅಭ್ಯರ್ಥಿಗಳ ಬೇಡಿಕೆಯನ್ನು ಹತ್ತಿಕ್ಕಲು ಭ್ರಷ್ಟ ಬಿಜೆಪಿ ಸರ್ಕಾರ ಹಿಂಸಾಚಾರದ ಮಾರ್ಗ ಅನುಸರಿಸಿದೆ. ಈ ಸರ್ಕಾರಕ್ಕೆ ಯುವ ಜನರಿಗೆ ಉದ್ಯೋಗ ಕೊಡುವ ಉದ್ದೇಶವಿಲ್ಲ. ಅವರದ್ದು ಯುವ ವಿರೋಧಿ ನೀತಿಯಾಗಿದೆ’ ಎಂದು ಅವರು ದೂರಿದ್ದಾರೆ. 

‘ಒಂದೇ ಪಾಳಿಯಲ್ಲಿ ಪರೀಕ್ಷೆಗಳನ್ನು ನಡೆಸುವಂತೆ ಒತ್ತಾಯಿಸಿ ಅಭ್ಯರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಯೋಗಿ ನೇತೃತ್ವದ ಸರ್ಕಾರವು ಯುವ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಂಡಿದೆ’ ಎಂದು ಅವರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.