ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯವು ಮಾರ್ಚ್ 4 ರವರೆಗೆ (ಐದು ದಿನ) ಕೇಂದ್ರ ತನಿಖಾ ಸಂಸ್ಥೆಯ ಸುಪರ್ದಿಗೆ ನೀಡಿದೆ.
ಸಿಸೋಡಿಯಾ ಅವರನ್ನು ಕಸ್ಟಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಅವಕಾಶ ನೀಡುವಂತೆ ಸಿಬಿಐ ಸಲ್ಲಿಸಿದ್ದ ಮನವಿಯನ್ನು ವಿಶೇಷ ನ್ಯಾಯಾಧೀಶ ಎಂ. ಕೆ. ನಾಗ್‌ಪಾಲ್ ಅವರು ಅಂಗೀಕರಿಸಿದರು.
ಇದಕ್ಕೂ ಮೊದಲು, ಸಿಬಿಐ ಮತ್ತು ಸಿಸೋಡಿಯಾ ಪರ ವಕೀಲರ ವಾದ ಆಲಿಸಿದ್ದ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿತ್ತು.
2021-22ರ ಮದ್ಯ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಸಂಜೆ ಸಿಸೋಡಿಯಾ ಅವರನ್ನು ಬಂಧಿಸಿತ್ತು. ವಿವಾದಿತ ಮದ್ಯನೀತಿಯನ್ನು ಈಗಾಗಲೇ ರದ್ದು ಮಾಡಲಾಗಿದೆ.
ಅಬಕಾರಿ ಹಗರಣದ ವಿಚಾರಣೆ ವೇಳೆ ಸಿಸೋಡಿಯಾ ಅವರು ನೀಡಿದ ಉತ್ತರಗಳು ತೃಪ್ತಿಕರವಾಗಿ ಇರಲಿಲ್ಲ, ಈ ಕಾರಣಕ್ಕೆ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸುವ ಅಗತ್ಯ ಉಂಟಾಯಿತು ಎಂದು ಬಂಧನದ ವೇಳೆ ಸಿಬಿಐ ತಿಳಿಸಿತ್ತು.
ಸಿಸೋಡಿಯಾ ವಿಚಾರಣೆಗೆ ಸಹಕರಿಸುತ್ತಿಲ್ಲ ಹಾಗೂ ಹಗರಣ ಕುರಿತ ಪ್ರಮುಖ ವಿಚಾರಗಳಲ್ಲಿ ಸ್ಪಷ್ಟ ಉತ್ತರ ನೀಡಲು ಹಿಂದೇಟು ಹಾಕಿದರು ಎಂದು ಅಧಿಕಾರಿಗಳು ಹೇಳಿದರು. ಎಫ್‌ಐಆರ್‌ನಲ್ಲಿ ಹೆಸರು ಉಲ್ಲೇಖ ವಾಗಿರುವ ದಿನೇಶ್ ಅರೋರಾ ಹಾಗೂ ಇತರರ ಜೊತೆಗಿನ ನಂಟಿನ ಕುರಿತು ಕೇಳಿದ ಪ್ರಶ್ನೆಗಳಿಗೆ ಅವರು ಸಮರ್ಪಕ ಉತ್ತರ ನೀಡಲಿಲ್ಲ ಎಂದು ಹೇಳಿದರು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.