ನವದೆಹಲಿ: ಅಬಕಾರಿ ನೀತಿ ಹಗರಣದ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ ದೂರಿನ ಮೇರೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಬುಧವಾರ ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಇದೇ 17ರಂದು ವಿಚಾರಣೆಗೆ ಹಾಜರಾಗುವಂತೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಆದೇಶಿಸಿದ್ದಾರೆ.
ಈ ವಿಚಾರದಲ್ಲಿ ತನ್ನ ವಾದ ಮುಕ್ತಾಯಗೊಳಿಸಿರುವುದಾಗಿ ಇ.ಡಿ ಕೋರ್ಟ್‌ಗೆ ಹೇಳಿಕೆ ಸಲ್ಲಿಸಿದ ಬಳಿಕ ನ್ಯಾಯಾಧೀಶರು ಆದೇಶ ಕಾಯ್ದಿರಿಸಿದ್ದರು. 5ನೇ ನೋಟಿಸ್‌ಗೂ ಕೇಜ್ರಿವಾಲ್ ಗೈರಾದ ನಂತರ ಅವರ ವಿರುದ್ಧ ಇ.ಡಿ ಫೆ.3ರಂದು ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು.
ಆಮ್ ಆದ್ಮಿ ಪಕ್ಷದ ಎಎಪಿ ಸಂಚಾಲಕರೂ ಆದ ಕೇಜ್ರಿವಾಲ್ ಅವರು ಈ ಹಿಂದೆ ‘ಈ ಸಮನ್ಸ್‌ಗಳು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ. ಚುನಾವಣಾ ಪ್ರಚಾರಕ್ಕೆ ಹೋಗದಂತೆ ನನ್ನನ್ನು ತಡೆಯುವ ಉದ್ದೇಶದಿಂದ ಸಮನ್ಸ್ ನೀಡಲಾಗಿದೆ’ ಎಂದು ಆರೋಪಿಸಿ ಇ.ಡಿಗೆ ಪತ್ರ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.