ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪ ಹೊತ್ತ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧದ ವಿಚಾರಣೆ ತಡೆಗೆ ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣದಲ್ಲಿನ ಚಾರ್ಜ್‌ಶೀಟ್ ಆಧರಿಸಿ ವಿಚಾರಣೆ ಕೈಗೊಳ್ಳುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ ಕೇಜ್ರಿವಾಲ್ ಅವರ ಮನವಿಯ ಕುರಿತು ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರು ಜಾರಿ ನಿರ್ದೇಶನಾಲಯದ ಪ್ರತಿಕ್ರಿಯೆ ಕೋರಿದ್ದಾರೆ. ವಿಚಾರಣೆಯನ್ನು ಡಿ.20ಕ್ಕೆ ಮುಂದೂಡಿದ್ದಾರೆ.
ಅಪರಾಧ ಎಸಗಿದಾಗ ಆರೋಪಿ ಜನ ಪ್ರತಿನಿಧಿ ಆಗಿದ್ದರು. ಆದರೆ, ಪ್ರಾಸಿಕ್ಯೂಷನ್‌ಗೆ ಯಾವುದೇ ಅನುಮತಿ ಇರಲಿಲ್ಲ. ಈ ನಡುವೆ ವಿಶೇಷ ನ್ಯಾಯಾಲಯವು ಚಾರ್ಜ್‌ಶೀಟ್ ಆಧರಿಸಿ ವಿಚಾರಣೆ ಕೈಗೊಂಡಿದ್ದು, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಕೇಜ್ರಿವಾಲ್ ಕೋರಿದ್ದರು.
ಕೇಜ್ರಿವಾಲ್ ಅವರನ್ನು ವಿಚಾರಣೆ ಮಾಡಲು ಅನುಮತಿ ಪಡೆಯಲಾಗಿತ್ತು. ಈ ಕುರಿತಂತೆ ಪ್ರಮಾಣಪತ್ರ ಸಲ್ಲಿಸುವುದಾಗಿ ಜಾರಿ ನಿರ್ದೇಶನಾಲಯದ (ಇಡಿ) ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್‌ಗೆ ತಿಳಿಸಿದ್ದಾರೆ.
ಕೇಜ್ರಿವಾಲ್ ಅವರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜು.12ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಸೆ.13ರಂದು ಸಿಬಿಐ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಕೋರ್ಟ್ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.