ADVERTISEMENT

ಕವಿತಾ ಜಾಮೀನು ಅರ್ಜಿಗೆ 22ರ ಒಳಗೆ ಪ್ರತಿಕ್ರಿಯೆ: ಜಾರಿ ನಿರ್ದೇಶನಾಲಯ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 12:21 IST
Last Updated 20 ಆಗಸ್ಟ್ 2024, 12:21 IST
ಕೆ.ಕವಿತಾ
ಕೆ.ಕವಿತಾ   

ನವದೆಹಲಿ: ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆಗಸ್ಟ್‌ 22ರ ಒಳಗಾಗಿ ತನ್ನ ಪ್ರತಿಕ್ರಿಯೆ ಸಲ್ಲಿಸುವುದಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನು ಒಳಗೊಂಡ ನ್ಯಾಯಪೀಠದ ಎದುರು ಇ.ಡಿ ಮತ್ತು ಸಿಬಿಐ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ಅವರು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಪ್ರತಿಕ್ರಿಯೆಯನ್ನು ಸಲ್ಲಿಸಿದೆ. ಆಗಸ್ಟ್‌ 22ರ ಒಳಗಾಗಿ ಇ.ಡಿ ಸಹ ಪ್ರತಿಕ್ರಿಯೆ ಸಲ್ಲಿಸಲಿದೆ’ ಎಂದು ಹೇಳಿದರು.

ಬಳಿಕ ನ್ಯಾಯಪೀಠವು ವಿಚಾರಣೆಯನ್ನು ಆಗಸ್ಟ್‌ 27ಕ್ಕೆ ಮುಂದೂಡಿತು.

ADVERTISEMENT

ಜಾಮೀನು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕವಿತಾ ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಆಗಸ್ಟ್‌ 12ರಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕವಿತಾ ಅವರನ್ನು ಇ.ಡಿ ಮಾರ್ಚ್‌ 16ರಂದು ಮತ್ತು ಸಿಬಿಐ ಏ.11ರಂದು ಬಂಧಿಸಿದೆ. ಕವಿತಾ ಅವರು ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.