ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.
ಸರ್ಕಾರ ಸದ್ಯ ಹಿಂಪಡೆದಿರುವ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತಮ್ಮನ್ನು ಬಂಧಿಸಿರುವುದನ್ನು ಮತ್ತು ಜಾಮೀನು ನಿರಾಕರಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದಾರೆ.
ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು, ಎರಡೂ ಪಕ್ಷದವರ ವಾದ ಪ್ರತಿವಾದವನ್ನು ಆಲಿಸಿದ ಬಳಿಕ ಆದೇಶವನ್ನು ಕಾಯ್ದಿರಿಸಿದೆ.
ಎಎಪಿಯ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 26ರಂದು ಸಿಬಿಐ ಬಂಧಿಸಿತ್ತು. ಸಿಬಿಐ ಕ್ರಮವನ್ನು ದೆಹಲಿ ಹೈಕೋರ್ಟ್ ಆಗಸ್ಟ್ 5ರಂದು ಎತ್ತಿ ಹಿಡಿದಿತ್ತು.
ಅಬಕಾರಿ ನೀತಿ ಜಾರಿ ವೇಳೆ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ದೆಹಲಿ ಲೆಫ್ಟಿನಂಟ್ ಗವರ್ನರ್ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು. ಹೀಗಾಗಿ, ಸರ್ಕಾರ ಆ ನೀತಿಯನ್ನು 2022ರಲ್ಲಿ ಹಿಂಪಡೆದಿತ್ತು.
ಅಬಕಾರಿ ನೀತಿ ಮಾರ್ಪಾಡು ಸಂದರ್ಭದಲ್ಲಿ ಅಕ್ರಮವೆಸಗಲಾಗಿದೆ. ಪರವಾನಗಿ ನೀಡುವ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.