ADVERTISEMENT

ಕೇಜ್ರಿವಾಲ್ ಬಂಧನ: ಪ್ರತಿಕ್ರಿಯಿಸಲು ದೆಹಲಿ ಹೈಕೋರ್ಟ್‌ ಬಳಿ ಕಾಲಾವಕಾಶ ಕೋರಿದ ED

ಪಿಟಿಐ
Published 27 ಮಾರ್ಚ್ 2024, 13:26 IST
Last Updated 27 ಮಾರ್ಚ್ 2024, 13:26 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ದೃಶ್ಯ (ಸಂಗ್ರಹ ಚಿತ್ರ)
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ದೃಶ್ಯ (ಸಂಗ್ರಹ ಚಿತ್ರ)   ಪಿಟಿಐ ಚಿತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಪ್ರತಿಕ್ರಿಯಿಸಲು ಕಾಲಾವಕಾಶ ನೀಡುವಂತೆ ಜಾರಿ ನಿರ್ದೇಶನಾಲಯವು ದೆಹಲಿ ಹೈಕೋರ್ಟ್ ಅನ್ನು ಕೋರಿದೆ.

ಮಂಗಳವಾರವಷ್ಟೇ ಬೃಹತ್ ಅರ್ಜಿಯನ್ನು ಸಲ್ಲಿಸಲಾಗಿದೆ. ಹೀಗಾಗಿ ಈ ಕುರಿತು ದಾಖಲೆಗಳ ಸಹಿತ ಪ್ರತಿಕ್ರಿಯಿಸಲು ಮೂರು ವಾರಗಳ ಕಾಲಾವಕಾಶ ನೀಡಬೇಕು ಎಂದು ಜಾರಿ ನಿರ್ದೇಶನಾಲಯ ಪರ ಹಾಜರಾದ ಸಹ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ಪೀಠವನ್ನು ಕೋರಿದರು.

ಎಎಪಿ ಮುಖಂಡ ಕೇಜ್ರಿವಾಲ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ‘ಹೆಚ್ಚಿನ ಕಾಲಾವಕಾಶ ಕೋರಿರುವುದು, ಪ್ರಕರಣವನ್ನು ವಿಳಂಬ ಮಾಡುವ ತಂತ್ರವಾಗಿದೆ. ಈ ಪ್ರಕರಣದಲ್ಲಿ ವ್ಯಕ್ತಿಯ ಬಂಧನ ಮತ್ತು ಹಲವು ಅನುಮಾನಾಸ್ಪದ ವಿಷಯಗಳಿದ್ದು, ಅವುಗಳ ಕುರಿತು ಹೈಕೋರ್ಟ್ ತ್ವರಿತಗತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು, ಈ ವಿಷಯ ಕುರಿತು ಮುಂದೆ ವಿಚಾರಣೆ ನಡೆಸಲಾಗುವುದು ಎಂದರು.

ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯವು ಮಾರ್ಚ್ 21ರಂದು ಬಂಧಿಸಿತ್ತು. ಮಾರ್ಚ್‌ 28ರವರೆಗೂ ಇವರನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ದೆಹಲಿ ನ್ಯಾಯಾಲಯ ಆದೇಶಿಸಿತ್ತು. ತಮ್ಮನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕೇಜ್ರಿವಾಲ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.