ADVERTISEMENT

ಭಾನುವಾರವೂ ಮುಂದುವರಿದ ಭೋಜಶಾಲಾ ಸಮೀಕ್ಷೆ

ಪಿಟಿಐ
Published 24 ಮಾರ್ಚ್ 2024, 13:51 IST
Last Updated 24 ಮಾರ್ಚ್ 2024, 13:51 IST
ಭೋಜಶಾಲಾ/ಕಮಲ ಮೌಲಾ ಮಸೀದಿಯ ಹೊರಗಡೆ ಶುಕ್ರವಾರ ಬಿಗಿ ಭದ್ರತೆ ಕಲ್ಪಿಸಲಾಗಿತ್ತು –ಪಿಟಿಐ ಚಿತ್ರ
ಭೋಜಶಾಲಾ/ಕಮಲ ಮೌಲಾ ಮಸೀದಿಯ ಹೊರಗಡೆ ಶುಕ್ರವಾರ ಬಿಗಿ ಭದ್ರತೆ ಕಲ್ಪಿಸಲಾಗಿತ್ತು –ಪಿಟಿಐ ಚಿತ್ರ   

ಧರ್: ವಿವಾದಿತ ಭೋಜಶಾಲಾ/ಕಮಲ ಮೌಲಾ ಮಸೀದಿ ಸಂಕೀರ್ಣದಲ್ಲಿ 2003ರ ನಂತರದಲ್ಲಿ ಇರಿಸಿರುವ ವಸ್ತುಗಳನ್ನು ಸಮೀಕ್ಷೆಯ ವ್ಯಾಪ್ತಿಯಿಂದ ಹೊರಗಿರಿಸಬೇಕು ಎಂದು ಕೋರಿ ಮುಸ್ಲಿಂ ಪ್ರತಿನಿಧಿಗಳು ಅಲ್ಲಿ ಸಮೀಕ್ಷೆ ನಡೆಸುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಮನವಿ ಮಾಡಿದ್ದಾರೆ.

ಮಧ್ಯಪ್ರದೇಶ ಹೈಕೋರ್ಟ್‌ನ ಸೂಚನೆಯ ಅನುಸಾರ ಎಎಸ್‌ಐ ಅಧಿಕಾರಿಗಳ ತಂಡವು ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರ ಉಪಸ್ಥಿತಿಯಲ್ಲಿ ಸಮೀಕ್ಷೆಯನ್ನು ಭಾನುವಾರ ಮುಂದುವರಿಸಿತು.

ಹಿಂದೂ ಅರ್ಜಿದಾರರಾದ ಆಶಿಶ್ ಗೋಯಲ್ ಮತ್ತು ಗೋಪಾಲ್ ಶರ್ಮ ಅವರು ಕೂಡ ಭೋಜಶಾಲಾ ಸಂಕೀರ್ಣದಲ್ಲಿ ಇದ್ದರು. ಈ ಸಂಕೀರ್ಣಕ್ಕೆ ಸಂಬಂಧಿಸಿದ ಕಾನೂನು ಸಮರದಲ್ಲಿ ಭಾಗಿಯಾಗಿರುವ ಕಮಲ ಮೌಲಾ ಮಸೀದಿ ಅಭಿವೃದ್ಧಿ ಸಂಘದ ಅಧ್ಯಕ್ಷ ಅಬ್ದಲ್ ಸಮದ್ ಅವರು ತಮ್ಮ ಆಕ್ಷೇಪಗಳನ್ನು ಎಎಸ್‌ಐ ಅಧಿಕಾರಿಗಳಿಗೆ ಶನಿವಾರವೇ ಇ–ಮೇಲ್ ಮೂಲಕ ತಿಳಿಸಿದ್ದಾರೆ.

ADVERTISEMENT

‘ಭೋಜಶಾಲಾದಲ್ಲಿ 2003ರ ನಂತರದಲ್ಲಿ ಇರಿಸಿದ ವಸ್ತುಗಳನ್ನು ಸಮೀಕ್ಷೆಯ ವ್ಯಾಪ್ತಿಗೆ ಸೇರಿಸಬಾರದು ಎಂಬುದು ನಮ್ಮ ಆಗ್ರಹ’ ಎಂದು ಸಮದ್ ಅವರು ತಿಳಿಸಿದರು.

ಎಎಸ್‌ಐ ಸಮೀಕ್ಷಾ ತಂಡವನ್ನು ಎರಡಾಗಿ ವಿಭಜಿಸಿರುವುದರ ವಿಚಾರವಾಗಿಯೂ ಸಮದ್ ಅವರು ಕಳವಳ ವ್ಯಕ್ತಪಡಿಸಿದರು. ‘ಮಸೀದಿ ಅಭಿವೃದ್ಧಿ ಸಮಿತಿಯ ಪರ ಪ್ರತಿನಿಧಿ ನಾನು ಮಾತ್ರ. ಸಮೀಕ್ಷೆ ನಡೆಸುತ್ತಿರುವ ಎಎಸ್‌ಐ ತಂಡವು ಒಂದು ಕಡೆ ಮಾತ್ರ ಗಮನ ನೀಡಿ ಕೆಲಸ ಮಾಡಬೇಕು, ತಂಡಗಳಲ್ಲಿ ಆ ಕೆಲಸ ಮಾಡಬಾರದು’ ಎಂದು ಸಮದ್ ಆಗ್ರಹಿಸಿದರು.

ಭೋಜಶಾಲಾ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ಆರು ವಾರಗಳಲ್ಲಿ ನಡೆಸಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್‌ ಮಾರ್ಚ್‌ 11ರಂದು ಆದೇಶಿಸಿದೆ. ಭೋಜಶಾಲಾ ಸಂಕೀರ್ಣವು ಮಧ್ಯಯುಗದ ಒಂದು ಸ್ಮಾರಕ. ಇಲ್ಲಿರುವುದು ವಾಗ್ದೇವಿ (ಸರಸ್ವತಿ) ದೇವಸ್ಥಾನ ಎಂದು ಹಿಂದೂಗಳು ಭಾವಿಸಿದ್ದಾರೆ. ಮುಸ್ಲಿಂ ಸಮುದಾಯವು ಇದು ಕಮಲ ಮೌಲಾ ಮಸೀದಿ ಎಂದು ನಂಬಿದೆ.

2003ರ ಏಪ್ರಿಲ್‌ 7ರಂದು ಎಎಸ್‌ಐ ಹೊರಡಿಸಿದ ಆದೇಶದ ಅನ್ವಯ ಭೋಜಶಾಲಾ ಸಂಕೀರ್ಣದಲ್ಲಿ ಪ್ರತಿ ಮಂಗಳವಾರ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ಇದೆ. ಮುಸ್ಲಿಮರಿಗೆ ಪ್ರತಿ ಶುಕ್ರವಾರ ನಮಾಜ್ ಮಾಡಲು ಅವಕಾಶ ಇದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.