ನವದೆಹಲಿ (ಪಿಟಿಐ): ಸಂಧಾನ ಮಾತುಕತೆಯಲ್ಲಿ ನಿಗದಿ ಆಗಿರುವಂತೆ ಮಾಧ್ಯಮ ಪ್ರಮುಖರಾದ ಕಲಾನಿಧಿ ಮಾರನ್ ಮತ್ತು ಅವರ ಕಲ್ ಏರ್‌ವೇಸ್ ಸಂಸ್ಥೆಗೆ ₹578 ಕೋಟಿ ಪಾವತಿಸಲು ಸ್ಪೈಸ್‌ಜೆಟ್ ಸಂಸ್ಥೆಗೆ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಷೇರು ವರ್ಗಾವಣೆ ವಿವಾದವನ್ನು ಇತ್ಯರ್ಥಪಡಿಸುವುದರ ಭಾಗವಾಗಿ ₹578 ಕೋಟಿ ಪಾವತಿಸಬೇಕು ಎಂದು ನಿಗದಿಯಾಗಿತ್ತು. ‘ಇವು ವಿಲಾಸಿ ಮೊಕದ್ದಮೆಗಳು’ ಎಂದು ಕೋರ್ಟ್ ಶುಕ್ರವಾರ ಬಣ್ಣಿಸಿತು.
ಈ ಹಿಂದೆ ಜೂನ್ 1ರಂದು ಗಡುವು ವಿಸ್ತರಿಸಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್, ಇತ್ಯರ್ಥವಾಗಿರುವ ಮೊತ್ತಕ್ಕೆ ಬಡ್ಡಿಯಾಗಿ ಪಾವತಿಸಲು ₹ 75 ಕೋಟಿ ಅನ್ನು ಠೇವಣಿ ಇಡಬೇಕು ಎಂದು ಸ್ಪೈಸ್‌ಜೆಟ್ ಸಂಸ್ಥೆಗೆ ನಿರ್ದೇಶಿಸಿತ್ತು.
ಅದಕ್ಕೂ ಹಿಂದೆ ಸುಪ್ರೀಂ ಕೋರ್ಟ್ ಮೇ 13ರ ಒಳಗೆ, ಬಡ್ಡಿ ಮೊತ್ತವನ್ನು ಪಾವತಿಸಲು ಸ್ಪೈಸ್‌ಜೆಟ್ ವಿಫಲವಾದಲ್ಲಿ ಆ ಸಂಸ್ಥೆಯು ಬ್ಯಾಂಕ್ ಖಾತರಿಯಾಗಿ ಇಟ್ಟಿರುವ ₹270 ಕೋಟಿ ಅನ್ನು ತಕ್ಷಣವೇ ನಗದೀಕರಣಗೊಳಿಸಬಹುದು ಎಂದು ಆದೇಶಿಸಿತ್ತು.
ಶುಕ್ರವಾರ ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರಿದ್ದ ಪೀಠ, ಸ್ಪೈಸ್‌ಜೆಟ್ ಸಂಸ್ಥೆಯನ್ನು ಪ್ರತಿನಿಧಿಸಿದ್ದ ವಕೀಲ ಮುಕುಲ್ ರೋಹಟಗಿ ಅವರ ವಾದವನ್ನು ಮಾನ್ಯ ಮಾಡಲಿಲ್ಲ.
‘ಇಡೀ ಪ್ರಕರಣದ ಕಸರತ್ತಿನಲ್ಲಿ ಹಲವು ವಕೀಲರೂ ಭಾಗಿಯಾಗಿದ್ದಾರೆ ಎಂಬುದು ನಿಮಗೂ ಗೊತ್ತಿದೆ. ಒಟ್ಟು ಉದ್ದೇಶ ಕೋರ್ಟ್ ಆದೇಶ ಜಾರಿ ಆಗದಂತೆ ವಿಳಂಬ ಮಾಡುವುದೇ ಆಗಿದೆ. ವೈಯಕ್ತಿಕವಾಗಿ ನನಗೆ ಇದು ಒಪ್ಪಿಗೆ ಇಲ್ಲ. ಕೋರ್ಟ್ ಆದೇಶಕ್ಕೆ ಬದ್ಧರಾಗಬೇಕು. ದೆಹಲಿ ಹೈಕೋರ್ಟ್ ಈ ಆದೇಶವನ್ನು ಜಾರಿಗೊಳಿಸಲಿದೆ’ ಎಂದು ಸಿಜೆಐ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.