ನವದೆಹಲಿ: ಅತ್ಯಾಚಾರ ಪ್ರಕರಣಗಳು ಹಾಗೂ ಪೋಕ್ಸೊ ಕಾಯ್ದೆಯ ಅಡಿ ದಾಖಲಾಗುವ ಪ್ರಕರಣಗಳಿಗೆ ಮೀಸಲಾದ ತ್ವರಿತಗತಿ ವಿಶೇಷ ನ್ಯಾಯಾಲಯಗಳ (ಎಫ್‌ಟಿಎಸ್‌ಸಿ) ಸ್ಥಾಪನೆಗೆ ವೇಗ ನೀಡಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣಾ ದೇವಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಮತ್ತೆ ಒತ್ತಾಯಿಸಿದ್ದಾರೆ.
ಆಗಸ್ಟ್ 30ರಂದು ಬರೆದಿರುವ ಪತ್ರದಲ್ಲಿ ದೇವಿ ಅವರು ಪಶ್ಚಿಮ ಬಂಗಾಳದಲ್ಲಿ ಈಗ ಕಾರ್ಯಾಚರಿಸುತ್ತಿರುವ ತ್ವರಿತಗತಿ ನ್ಯಾಯಾಲಯಗಳ (ಎಫ್‌ಟಿಸಿ) ಕುರಿತ ಕಳವಳವನ್ನು ಪ್ರಸ್ತಾಪಿಸಿದ್ದಾರೆ. ಹೀನ ಅಪರಾಧಗಳ ಸಂತ್ರಸ್ತರಿಗೆ ನ್ಯಾಯದಾನವು ತ್ವರಿತವಾಗಿ ಹಾಗೂ ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಆಗಸ್ಟ್ 25ರಂದು ಬರೆದಿದ್ದ ಪತ್ರವೊಂದರಲ್ಲಿ ಸಚಿವೆ ದೇವಿ ಅವರು, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಅಗತ್ಯವನ್ನು ಹಾಗೂ ಕಠಿಣ ಕಾನೂನು ಇರಬೇಕಾದ ಮಹತ್ವವನ್ನು ವಿವರಿಸಿದ್ದರು. ಆ ಪತ್ರದ ಬಗ್ಗೆ ಆಗಸ್ಟ್ 30ರ ಪತ್ರದಲ್ಲಿಯೂ ಉಲ್ಲೇಖಿಸಿದ್ದಾರೆ.
ಮಮತಾ ಅವರಿಂದ ಬಂದ ಪತ್ರವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವೆ ದೇವಿ, ಪಶ್ಚಿಮ ಬಂಗಾಳ ಸರ್ಕಾರವು 88 ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸಿದೆಯಾದರೂ, ಈ ನ್ಯಾಯಾಲಯಗಳು ಕೇಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ ಸೂಚಿಸಲಾದ ತ್ವರಿತಗತಿ ವಿಶೇಷ ನ್ಯಾಯಾಲಯಗಳಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ತ್ವರಿತಗತಿ ನ್ಯಾಯಾಲಯಗಳು ಸಿವಿಲ್ ವ್ಯಾಜ್ಯಗಳು ಸೇರಿದಂತೆ ಹಲವು ಬಗೆಯ ಪ್ರಕರಣಗಳ ವಿಚಾರಣೆ ನಡೆಸುತ್ತವೆ. ಅವು ಅತ್ಯಾಚಾರ ಪ್ರಕರಣಗಳು ಹಾಗೂ ಪೋಕ್ಸೊ ಕಾಯ್ದೆಯ ಅಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗೆ ಇರುವ ವಿಶೇಷ ನ್ಯಾಯಾಲಯಗಳಲ್ಲ ಎಂದು ಸಚಿವೆ ವಿವರಿಸಿದ್ದಾರೆ.
ಪಶ್ಚಿಮ ಬಂಗಾಳದ ತ್ವರಿತಗತಿ ನ್ಯಾಯಾಲಯಗಳಲ್ಲಿ ಜೂನ್ 30ರವರೆಗೆ 81 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆಯ ಹಂತದಲ್ಲಿ ಇದ್ದವು. ಅತ್ಯಾಚಾರ ಪ್ರಕರಣಗಳು ಹಾಗೂ ಪೋಕ್ಸೊ ಕಾಯ್ದೆಯ ಅಡಿ ದಾಖಲಾದವನ್ನೂ ಸೇರಿ ಒಟ್ಟು 48,600 ಪ್ರಕರಣಗಳು ವಿಚಾರಣೆಯ ಹಂತದಲ್ಲಿ ಇದ್ದರೂ, ರಾಜ್ಯವು ಹೆಚ್ಚುವರಿಯಾಗಿ 11 ತ್ವರಿತಗತಿ ವಿಶೇಷ ನ್ಯಾಯಾಲಯಗಳನ್ನು ಇನ್ನೂ ಕಾರ್ಯಾರಂಭ ಮಾಡಿಲ್ಲ ಎಂದು ದೇವಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ನ್ಯಾಯಾಲಯಗಳ ವಿಚಾರವಾಗಿ ರಾಜ್ಯವು ಒದಗಿಸಿರುವ ಮಾಹಿತಿಯು ಸಮರ್ಪಕವಾಗಿ ಇಲ್ಲ ಎಂದು ಹೇಳಿರುವ ಸಚಿವೆ, ಇದು ವಿಳಂಬವನ್ನು ಮುಚ್ಚಿಕೊಳ್ಳುವ ಯತ್ನ ಎಂದು ದೂರಿದ್ದಾರೆ.
ಮಾನವ ಹಕ್ಕು ಆಯೋಗದಿಂದ ನೋಟಿಸ್
ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಆಕೆಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಆಗಸ್ಟ್ 27ರಂದು ಕೋಲ್ಕತ್ತ ಪೊಲೀಸರು ಅತಿಯಾಗಿ ಬಲಪ್ರಯೋಗ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಕೋಲ್ಕತ್ತ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದೆ.
ಆರೋಪಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮ ಏನು ಎಂಬ ಬಗ್ಗೆ ಪೊಲೀಸ್ ಆಯುಕ್ತರಿಂದ ಎರಡು ವಾರಗಳಲ್ಲಿ ವರದಿ ಬೇಕು ಎಂದು ಆಯೋಗವು ತಿಳಿಸಿದೆ.
ಆಗಸ್ಟ್ 27ರ ‘ನಬನ್ನಾ ಅಭಿಯಾನ್’ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಅಗತ್ಯಕ್ಕಿಂತ ಹೆಚ್ಚು ಬಲ ಪ್ರಯೋಗ ಮಾಡಿದ್ದಾರೆ ಎಂದು ಒ.ಪಿ. ವ್ಯಾಸ್ ಎನ್ನುವವರು ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.