ADVERTISEMENT

ಚುನಾವಣಾ ಫಲಿತಾಂಶ: ಚಂದ್ರಬಾಬು ನಾಯ್ಡು –ಕೆ.ಚಂದ್ರಶೇಖರ ರಾವ್‌ ಪಾತ್ರವೇನು?

ಜೆ.ಬಿ.ಎಸ್‌ ಉಮಾನಾದ್‌
Published 21 ಮೇ 2019, 3:45 IST
Last Updated 21 ಮೇ 2019, 3:45 IST
 ಕೆ.ಚಂದ್ರಶೇಖರ ರಾವ್‌ ಹಾಗೂ ಚಂದ್ರಬಾಬು ನಾಯ್ಡು
ಕೆ.ಚಂದ್ರಶೇಖರ ರಾವ್‌ ಹಾಗೂ ಚಂದ್ರಬಾಬು ನಾಯ್ಡು    

ಹೈದರಾಬಾದ್‌: ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂಬುದು ತೆಲುಗು ಭಾಷಿಕ ರಾಜ್ಯಗಳಾದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ (ಕೆಸಿಆರ್‌) ಅವರ ಮಹತ್ವಾಕಾಂಕ್ಷೆ. ಮತಗಟ್ಟೆ ಸಮೀಕ್ಷೆಗಳ ಫಲಿತಾಂಶದ ರೀತಿಯಲ್ಲಿಯೇ ಚುನಾವಣಾ ಫಲಿತಾಂಶವೂ ಬಂದರೆ ಈ ಇಬ್ಬರು ಮುಖ್ಯಮಂತ್ರಿಗಳಿಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಪಾತ್ರವೇನೂ ಇರದು.

ತೆಲಂಗಾಣದಲ್ಲಿ ಕೆಸಿಆರ್‌ ಅವರ ಟಿಆರ್‌ಎಸ್‌ 12–16 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವೇ ಬಂದರೆ ಕೆಸಿಆರ್‌ ಅವರು ಕೇಂದ್ರದಲ್ಲಿ ದೊಡ್ಡ ಪಾತ್ರ ವಹಿಸಲಾಗದು. ಒಂದು ವೇಳೆ ಎನ್‌ಡಿಎ ಅಥವಾ ಯುಪಿಎಗೆ ಸರಳ ಬಹುಮತಕ್ಕೆ ಕೊರತೆಯಾದರೆ ಕೆಸಿಆರ್‌ ಅವರ ಪಾತ್ರ ನಿರ್ಣಾಯಕ ಎನಿಸಿಕೊಳ್ಳಲಿದೆ. ಬಿಜೆಪಿ ಜತೆಗೆ ಅವರು ಉತ್ತಮ ಸಂಬಂಧ ಹೊಂದಿರುವುದು ಅವರಿಗೆ ನೆರವಾಗಬಹುದು.

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಾಯ್ಡು ಅವರ ಟಿಡಿಪಿಗೆ ಹಿನ್ನಡೆ ಆಗಲಿದೆ. ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವೇ ಮುಂದಿನ ಸರ್ಕಾರ ರಚಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಹಾಗಿದ್ದರೂ, ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಕೂಟ ಕಟ್ಟಲು ನಾಯ್ಡು ಅವರು ಶ್ರಮಿಸುತ್ತಿದ್ದಾರೆ. ನಾಯ್ಡು ಅವರ ಪಕ್ಷವೇ ಆಂಧ್ರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದು ಕೇಂದ್ರದಲ್ಲಿ ನರೇಂದ್ರ ಮೋದಿ ಅವರೇ ಪ್ರಧಾನಿಯಾದರೆ ಕೇಂದ್ರದ ಜತೆಗೆ ಆಂಧ್ರ ಪ್ರದೇಶದ ಸಂಬಂಧ ಇನ್ನಷ್ಟು ಸಂಕೀರ್ಣಗೊಳ್ಳಬಹುದು. ಹಾಗೆಯೇ, ಲೋಕಸಭೆಯಲ್ಲಿ ಟಿಡಿಪಿಯ ಸ್ಥಾನಗಳು ಕಡಿಮೆಯಾದರೆ ವಿರೋಧ ಪಕ್ಷಗಳ ಕೂಟದಲ್ಲಿಯೂ ನಾಯ್ಡು ಅವರ ಪ್ರಭಾವ ಕುಸಿಯಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.