ಬೆಂಗಳೂರು: ಸಾಫ್ಟ್‌ವೇರ್ ಸೇವೆ ಒದಗಿಸಿದ ನೆಪದಲ್ಲಿ ಬಹುಕೋಟಿ ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಎಕ್ಸಾಲಾಜಿಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕಿಯೂ ಆದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ಟಿ.ವೀಣಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ಎಸ್‌ಎಫ್‌ಐಒ (ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಆಫೀಸ್), ಕಂಪನಿ ವಿರುದ್ಧ ತನಿಖೆಗೆ ಆದೇಶಿಸಿರುವುದನ್ನು ಪ್ರಶ್ನಿಸಿ ಟಿ.ವೀಣಾ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ಮತ್ತು ಡೆಪ್ಯೂಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್ ಅವರಿಗೆ ಮೌಖಿಕವಾಗಿ ಸೂಚಿಸಿತು.
ಎಕ್ಸಾಲಾಜಿಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ನಗರದ ಎಚ್‌ಎಸ್ಆರ್ ಲೇ ಔಟ್ ಸೆಕ್ಟರ್–7ರ 9ನೇ ಮುಖ್ಯರಸ್ತೆಯಲ್ಲಿ ಕಚೇರಿ ಹೊಂದಿದೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಟಿ.ವೀಣಾ ಇದರ ನಿರ್ದೇಶಕಿ ಮತ್ತು ಪಾಲುದಾರೆ ಆಗಿದ್ದಾರೆ. ಕೇರಳದ ಕೆಲವು ಕಂಪನಿಗಳಿಗೆ ಸಾಫ್ಟ್‌ವೇರ್ ಸೇವೆ ಒದಗಿಸಿ ಬಹುಕೋಟಿ ಮೊತ್ತದ ವರ್ಗಾವಣೆ ಮಾಡಿರುವ ಮತ್ತು ತೆರಿಗೆ ವಂಚನೆ ಆರೋಪವನ್ನು ಎಕ್ಸಾಲಜಿ ಕಂಪನಿ ಎದುರಿಸುತ್ತಿದೆ. ಆರೋಪದಡಿ ಖಚಿತ ಮಾಹಿತಿ ಆಧರಿಸಿ ಎಸ್‌ಎಫ್‌ಐಒ ಕಂಪನಿ ಕಾಯ್ದೆ–2013ರ ಕಲಂ 210ರ ಪ್ರಕಾರ ಪ್ರಾಥಮಿಕ ತನಿಖೆ ನಡೆಸಿತ್ತು. ಈ ಪ್ರಾಥಮಿಕ ತನಿಖಾ ಸಮಿತಿ ನೀಡಿದ್ದ ವರದಿ ಆಧರಿಸಿ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.