ರಾಂಚಿ: ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವಮಾನ ಅನುಭವಿಸಿದ್ದೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಚಂಪೈ ಸೊರೇನ್ ಹೇಳಿದ್ದಾರೆ.
ಇಂದು ದೆಹಲಿಗೆ ಭೇಟಿ ನೀಡಿರುವ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಇದೇ ವೇಳೆ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್‌ನಲ್ಲಿ ಸುದೀರ್ಘ ಬರಹವನ್ನು ಹಂಚಿಕೊಂಡಿದ್ದಾರೆ.
ತಮ್ಮ ಸರ್ಕಾರ ಜಾರಿಗೊಳಿಸಿದ್ದ ಎಲ್ಲ ಯೋಜನೆಗಳನ್ನು ಪಕ್ಷದ ನಾಯಕತ್ವವು ಜುಲೈ 3ರಂದು ರದ್ದುಪಡಿಸಿತ್ತು ಎಂದು ಬರೆದುಕೊಂಡಿದ್ದಾರೆ.
'ಯೋಜನೆಗಳ ರದ್ದತಿಗೆ ಕಾರಣವೇನು ಎಂದು ಪ್ರಶ್ನಿಸಿದಾಗ, ಜುಲೈ 3ರಂದು ಪಕ್ಷದ ಶಾಸಕರ ಸಭೆ ಇದೆ. ಅಲ್ಲಿವರೆಗೂ ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು' ಎಂದಿದ್ದಾರೆ.
'ಮುಖ್ಯಮಂತ್ರಿಯವರ ಯೋಜನೆಗಳನ್ನು ಮತ್ತೊಬ್ಬರು ರದ್ದುಪಡಿಸುವುದಕ್ಕಿಂತಲೂ ದೊಡ್ಡ ಅವಮಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಲು ಸಾಧ್ಯವೇ' ಎಂದು ಪ್ರಶ್ನಿಸಿದ್ದಾರೆ.
ಭೂ ಹಗರಣಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೇನ್ ಅವರು ಜನವರಿ 31ರಂದು ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದರು. ಅದಕ್ಕೂ ಕೆಲ ಕ್ಷಣ ಮುನ್ನ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅದಾದ ನಂತರ ಚಂಪೈ ಅವರು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಫೆಬ್ರುವರಿ 2ರಂದು ಪ್ರಮಾಣವಚನ ಸ್ವೀಕರಿಸಿದ್ದರು.
ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಸೊರೇನ್, ಮತ್ತೆ ಮುಖ್ಯಮಂತ್ರಿಯಾಗಿ (ಜುಲೈ 4ರಂದು) ಅಧಿಕಾರಕ್ಕೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.