ಮೋದಿ ಸರ್ಕಾರದ 2ನೇ ಅವಧಿಯ ಮೊದಲ ಬಜೆಟ್ ಹೇಗಿತ್ತು? ದೇಶಕ್ಕೆ ರವಾನಿಸಿದ ಸಂದೇಶ ಯಾವುದು?ಫೇಸ್‌ಬುಕ್ ಲೈವ್‌ನಲ್ಲಿ ಬಜೆಟ್‌ನ ಸಮಗ್ರ ನೋಟ ಕಟ್ಟಿಕೊಟ್ಟರುಹಿರಿಯ ಪತ್ರಕರ್ತರಾದ ಕೇಶವ ಝಿಂಗಾಡೆ ಮತ್ತು ಬಿ.ಎಂ.ಹನೀಫ್. ಅವರ ಮಾತುಗಳ ಅಕ್ಷರ ರೂಪ ಇಲ್ಲಿದೆ.
ಸಾಮಾನ್ಯವಾಗಿ ಹಣಕಾಸು ಸಚಿವರು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದಾಗ ನಮಗೆ ಒಂದು ಸ್ಪಷ್ಟ ಚಿತ್ರಣ ಸಿಗ್ತಿತ್ತು. ತುಂಬಾ ಆಳವಾದ ವಿವರಗಳು ಅಲ್ಲ ಅಂತಾದ್ರೂ ಕೂಡಾ, 100 ರೂಪಾಯಿಯಲ್ಲಿ ಯಾವುದಕ್ಕೆ ಎಷ್ಟು ಖರ್ಚು ಮಾಡ್ತೀವಿ ಅಂತ ಗೊತ್ತಾಗ್ತಿತ್ತು. ಒಂದು ವೇಳೆ ಆದಾಯಕ್ಕಿಂತ ಖರ್ಚು ಜಾಸ್ತಿ ಇದ್ದರೆ ಉಳಿದ ಹಣವನ್ನು ಎಲ್ಲಿಂದ ಹೊಂದಿಸಿಕೊಳ್ತೀವಿ ಅನ್ನುವ ವಿವರಣ ಬಜೆಟ್ ಭಾಷಣದಲ್ಲಿ ಇರ್ತಿತ್ತು.
ಆದರೆ ಈ ಸಲ ಇವರು ಮಂಡನೆ ಮಾಡಿರುವ ಬಜೆಟ್‌ನಲ್ಲಿ ಇಂಥ ಸ್ಪಷ್ಟವಾದ ಚಿತ್ರಣ ನಮಗೆ ಕಾಣಿಸ್ತಿಲ್ಲ. ಯಾವುದೇ ದೇಶದ ಆರ್ಥಿಕತೆಯು ಮುಂದಕ್ಕೆ ಚಿಮ್ಮುವುದಕ್ಕೆ ಶಕ್ತಿಯನ್ನು ಕೊಡುವುದು ಬಂಡವಾಳ ಹೂಡಿಕೆ. ಅದರ ಪರಿಣಾಮವಾಗಿ ಜನರ ಬಳಿ ಹಣ ಹೆಚ್ಚು ಸಿಗಬೇಕು. ಜನರು ಹಣ ಖರ್ಚು ಮಾಡುವುದು ಹೆಚ್ಚಾಗಬೇಕು. ಇಲ್ಲಿ ಬಂಡವಾಳ ಹೂಡಿಕೆಯ ಕೆಲ ಅಂಕಿಅಂಶಗಳನ್ನು ಕೊಟ್ಟಿದ್ದಾರೆ. ಅವು ಆಕರ್ಷಕವಾಗಿಯೂ ಇವೆ. ಆದರೆ ಅವರು ಹೇಳುವ ಒಟ್ಟು ಅಂಕಿಅಂಶಗಳನ್ನು ನೋಡಿದಾಗ ಹಣ ಎಲ್ಲಿಂದ ಬರುತ್ತೆ ಅಂತ ನನಗೆ ಗೊತ್ತಾಗ್ತಿಲ್ಲ.
ಬಜೆಟ್‌ನ ಸಮಗ್ರ ಮಾಹಿತಿಗೆhttps://www.prajavani.net/budget-2019ಲಿಂಕ್ ಕ್ಲಿಕ್ ಮಾಡಿ
ಮುಂದಿನ ಐದು ವರ್ಷಗಳಲ್ಲಿ ಲಕ್ಷ ಕೋಟಿ ಖರ್ಚು ಮಾಡ್ತೀವಿ ಅಂತಾರೆ. ಅದಕ್ಕೆ ಹಣವನ್ನು ಸರ್ಕಾರಿ ಉದ್ಯಮಗಳ ಬಂಡವಾಳ ಹಿಂತೆಗೆತ ಮತ್ತು ರಿಸರ್ವ್ ಬ್ಯಾಂಕ್‌ನ ಮೀಸಲು ನಿಧಿಯಿಂದ ತರ್ತೀವಿ ಅಂತಾರೆ. ರಿಸರ್ವ್ ಬ್ಯಾಂಕ್‌ನ ಸ್ವಾಯತ್ತತೆಯನ್ನು ಸರ್ಕಾರ ನಿರ್ಲಕ್ಷಿಸಿದ್ದರಿಂದ ಅಲ್ಲಿ ರಾಜೀನಾಮೆ ಪರ್ವ ಶುರುವಾಯಿತು.
ಜನರ ಆರ್ಥಿಕ ಸ್ಥಿತಿ 1.25 ಲಕ್ಷ ಕಿ.ಮೀ. ರಸ್ತೆ ಮೇಲ್ದರ್ಜೆಗೆ ಮಾಡುವುದಾಗಿ ಘೋಷಿಸಿದ್ದಾರೆ. ಕಡಿಮೆ ವೆಚ್ಚದಲ್ಲಿ ನಿರ್ಮಿಸುವ ಮನೆಗಳಿಗೆ ಹೆಚ್ಚು ಒತ್ತು ಕೊಡ್ತೀವಿ ಅಂತ ಹೇಳಿದ್ದಾರೆ. ಸುಮಾರು 1.95 ಕೋಟಿ ಗ್ರಾಮೀಣ ಮನೆ ನಿರ್ಮಿಸುವುದಾಗಿ ಹೇಳಿದ್ದಾರೆ. ಅಲ್ಲೆಲ್ಲಾ ಖರ್ಚಾದ್ರೆ ಗ್ರಾಮೀಣ ಆರ್ಥಿಕ ಚಟುವಟಿಕೆ ಸುಧಾರಿಸಬಹುದು ಅಂತ ಅನ್ನಿಸ್ತಿದೆ.
ಅದೆಲ್ಲಾ ಸರಿ, ಅದರೆ ಜನರ ಬಳಿ ದುಡ್ಡು ಬರುವ ದಾರಿ ಕಾಣಿಸ್ತಿಲ್ಲ. ಆದರೆ ಇನ್ನೊಂದು ಕಡೆ ಸರ್ಕಾರದ ಬಳಿಯೂ ಹೆಚ್ಚು ದುಡ್ಡು ಇರುವಂತೆ ಅನ್ನಿಸ್ತಿಲ್ಲ. ಇಲ್ಲಿಯವರೆಗೆ ಹಣಕಾಸು ಹಂಚಿಕೆಯನ್ನು ಸ್ಪಷ್ಟವಾಗಿ ಹೇಳ್ತಿದ್ರು. ಆದರೆ ಈ ಸಲ ಹಾಗೆ ಅನ್ನಿಸ್ತಿಲ್ಲ. ರಕ್ಷಣೆಗೆ ನಾವು ಎಷ್ಟು ಖರ್ಚು ಮಾಡ್ತೀವಿ ಅನ್ನೋದು ಗೊತ್ತಾಗಲ್ಲ. ರಕ್ಷಣೆಗೆ ನಾವು ಎಷ್ಟು ಖರ್ಚು ಮಾಡ್ತೀವಿ ಅನ್ನುವ ಮಾಹಿತಿ ಇಲ್ಲ. ಅನೆಕ್ಸ್ ಬಿ, ಸಿ ಎಲ್ಲವೂ ಇನ್ನು ಮುಂದೆ ಬರಬಹುದು. ಅವೆಲ್ಲ ಪಂಡಿತರಿಗೆ ಆಯ್ತು. ಜನಸಾಮಾನ್ಯರಿಗೆ ಬಜೆಟ್‌ನ ಮೇಲ್ನೋಟ ಕೊಡುವಾಗ ಸರಳವಾಗಿ ಒಂದು ರೂಪಾಯಿಯಲ್ಲಿ ನಾವು ಎಷ್ಟು ಖರ್ಚು ಮಾಡ್ಥೀವಿ ಅಂತ ಹೇಳಬೇಕಿತ್ತು.
ಈ ಸಲ ಅದನ್ನು ಹೇಳದಿರುವುದರಿಂದ ಯಾವುದನ್ನೋ ಮುಚ್ಚಿಡ್ತಿದ್ದಾರೆ ಅನ್ನುವ ಅನುಮಾನ ಬರ್ತಿದೆ. ವಿತ್ತೀಯ ಕೊರತೆ ಪ್ರಮಾಣವನ್ನು 3.4ರಿಂದ 3.3ಕ್ಕೆ ತರ್ತಿದ್ದಾರೆ ಅನ್ನುವುದು ಉತ್ತಮ ಬೆಳವಣಿಗೆ. ಆದರೆ ಅದನ್ನು ಸಾಧಿಸಲು ಇರುವ ದಾರಿಗಳ ಸುಳಿವನ್ನಾದರೂ ಕೊಡಬೇಕು. ಹಣದುಬ್ಬರ ನಿಯಂತ್ರಣಕ್ಕೆ ಏನು ಕ್ರಮ ಅಂತ್ಲೂ ಗೊತ್ತಾಗ್ತಿಲ್ಲ. ಆರೋಗ್ಯಪೂರ್ಣ ಆರ್ಥಿಕತೆಗೆ ಸ್ವಲ್ಪಮಟ್ಟಿಗಿನ ಹಣದುಬ್ಬರ ಬೇಕು. ಆದರೆ ಪೆಟ್ರೋಲ್, ಡೀಸೆಲ್ ಮೇಲೆ 2 ರೂಪಾಯಿ ಜಾಸ್ತಿ ಆಗುತ್ತೆ ಅನ್ನೋದು ಈ ಬಜೆಟ್‌ನ ದೊಡ್ಡ ಹೊಡೆತ. ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತೆ. ಹೊರೆ ಜನರ ಮೇಲೆ ಬೀರುತ್ತೆ.
ಬಜೆಟ್ ನಂತರ ಎಷ್ಟುಟ್ಯಾಕ್ಸ್ ಕಟ್ಟಬೇಕು?http://bit.ly/30esPwkಲಿಂಕ್ ಕ್ಲಿಕ್ ಮಾಡಿ, ಲೆಕ್ಕಹಾಕಿ
ಅಬಕಾರಿ ಸುಂಕ ಶೇ1, ರಸ್ತೆ ಮೂಲ ಸೌಕರ್ಯ ₹1ರ ಜೊತೆಗೆ ರಾಜ್ಯಗಳ ವ್ಯಾಟ್ ಸೇರುತ್ತೆ. ಇವೆಲ್ಲ ಸೇರಿದರೆ ಕನಿಷ್ಠ ಒಂದು ಲೀಟರ್ ಪೆಟ್ರೋಲ್ ಬೆಲೆ ₹3 ಜಾಸ್ತಿ ಆಗುತ್ತೆ. ನಿರ್ಮಲಾ ಸೀತಾರಾಮನ್ ಲೆಕ್ಕಾಚಾರದ ಪ್ರಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಕಡಿಮೆ ಆಗ್ತಿದೆ. ಆದರೆ ಇನ್ನೊಂದು ವರದಿಯ ಪ್ರಕಾರ ಕಚ್ಚಾತೈಲದ ಬೆಲೆ ಎರುಮುಖದಲ್ಲಿದೆ. ನೀವು ₹3 ಜಾಸ್ತಿ ಮಾಡಿದರೆ ಜನರ ಮೇಲೆ ಹೊಡೆತ ಬೀಳುತ್ತೆ.
ಜನಸಾಮಾನ್ಯರಿಗೆ ಚಿನ್ನದ ಮೋಹ ಇದೆ. ಐಷಾರಾಮಿ ವಸ್ತುಗಳ ಮೇಲೆ ತೆರಿಗೆ ಹಾಕಿ ಸಂಪನ್ಮೂಲ ಸಂಗ್ರಹಿಸುವುದು ಸಾಮಾನ್ಯ ಸಂಗತಿ. ಅದರಲ್ಲಿ ಅಂಥ ವಿಶೇಷ ಏನೂ ಇಲ್ಲ. ಆದರೆ, ಇವರು ಜನರ ದುಡ್ಡು ಖರ್ಚು ಮಾಡುವ ವಿಧಾನ ಹೆಚ್ಚು ಕಾಣಿಸ್ತಿಲ್ಲ. ಕೃಷಿಗೆ ಸಂಬಂಧಿಸಿದ ಅಂಕಿಅಂಶಗಳು ಈಗ ಹೊರಗೆ ಬರ್ತಿವೆ. ಅದರಲ್ಲೂ ಜಾಸ್ತಿ ಖರ್ಚು ಮಾಡ್ತಿದ್ದಾರೆ ಅಂತ ಅನ್ನಿಸಲ್ಲ.
ಕೃಷಿಯಲ್ಲಿ ಪ್ರೊಡಕ್ಟಿವಿಟಿ ಜಾಸ್ತಿ ಮಾಡುವಂಥದ್ದು ಕಾಣಿಸ್ತಿಲ್ಲ. ರೈತರ ಅಕೌಂಟ್‌ಗೆ ದುಡ್ಡು ಹಾಕುವುದರಿಂದ ಹೆಚ್ಚೇನೂ ಪ್ರಯೋಜನವಾಗಲ್ಲ. ಇದು ನಮ್ಮ ಆರ್ಥಿಕತೆ ಮುಂದಿರುವ ದೊಡ್ಡ ಸಮಸ್ಯೆ. ಹಣದ ಹರಿವು ಚೆನ್ನಾಗಿರಬೇಕು. ಆರ್ಥಿಕ ಚಟುವಟಿಕೆ ಜಾಸ್ತಿ ಆಗಬೇಕು. ಆಗ ಮಾತ್ರ ಸರ್ಕಾರದ ಬೊಕ್ಕಸ ತುಂಬುತ್ತೆ. ಹೋದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 78ರಷ್ಟು ಕೃಷಿಗೆ ಹಣ ಹೆಚ್ಚು ಕೊಟ್ಟಿದ್ದಾರೆ. ಹೋದ ವರ್ಷ ಕೃಷಿ ಕ್ಷೇತ್ರಕ್ಕೆ ₹77,507 ಕೋಟಿ ರೂಪಾಯಿ ನಿಗದಿಪಡಿಸಿದ್ದರು. ಈ ₹1.39 ಲಕ್ಷ ನಿಗದಿಪಡಿಸಿದ್ದಾರೆ.
ಈ ಹಣವನ್ನು ಸರ್ಕಾರ ಹೇಗೆ ಖರ್ಚು ಮಾಡುತ್ತೆ ಎನ್ನುವುದನ್ನೂ ನಾವು ಗಮನಿಸಬೇಕು. ಅದನ್ನು ಸರ್ಕಾರ ಸಾಮಾಜಿಕ ಯೋಜನೆ ಅನ್ನುವ ರೀತಿಯಲ್ಲಿ ಹಾಕಿದರೆ ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತಾ ಅಂತ ಯೋಚಿಸಬೇಕು. ರೈತರ ಅಕೌಂಟ್‌ಗೆ ಹಾಕುವ ದುಡ್ಡು ಅವರ ಹೊಟ್ಟೆಬಟ್ಟೆಗೆ ಆಯ್ತು ಅಷ್ಟೇ.
ತೆರಿಗೆಯಿಂದ ಎಷ್ಟು ಆದಾಯ ಬರುತ್ತೆ ಅನ್ನೋದು ಬಜೆಟ್‌ನಲ್ಲಿ ಸ್ಪಷ್ಟವಾಗಿ ಗೊತ್ತಾಗ್ತಿಲ್ಲ. ಜಿಎಸ್‌ಟಿ ಸುಧಾರಿಸಿಲ್ಲ. ಆದಾಯ ತೆರಿಗೆ ಸಂಗ್ರಹ ₹6 ಲಕ್ಷ ಕೋಟಿಯಿಂದ ₹11 ಲಕ್ಷ ಕೋಟಿಗೆ ಹೆಚ್ಚಾಗಬಹುದು ಎನ್ನುವ ನಿರೀಕ್ಷೆ ಇದೆ. ಬಹುಶಃ ಸಮಾಧಾನಕರ ಅಂಶ ಅದು ಅಂತ ಕಾಣಿಸ್ತಿದೆ. ಅದು ಬಿಟ್ಟರೆ ಶ್ರೀಮಂತರು, ಮಹಾಶ್ರೀಮಂತರ ಮೇಲೆ ಹಾಕಿರುವ ತೆರಿಗೆಯಿಂದ ಬರುವ ಆದಾಯ ನಗಣ್ಯ ಎನ್ನಿಸುವಷ್ಟಿದೆ.
ಬಹಿರಂಗವಾದ ರೀತಿಯಲ್ಲಿ, ಪಾರದರ್ಶಕ ರೀತಿಯಲ್ಲಿ ವಿವರ ಕಾಣಿಸ್ತಿಲ್ಲ. ಇದು ಮೊದಲ ಬಾರಿಗೆ ಹೀಗೆ ಆಗಿದೆ. ಈ ಹಿಂದೆ ಎಂದೂ ಹೀಗೆ ಆಗಿರಲಿಲ್ಲ. 10 ವರ್ಷದ ವಿಷನ್ ಹೇಳ್ತಿದ್ದೀರಿ. ಆದರೆ ಈ ವರ್ಷದ ವಿವರ ಇಲ್ಲ. ಸರ್ಕಾರ ಪಾರದರ್ಶಕವಾಗಿ ಮಾತನಾಡ್ತಿಲ್ಲ. ಮುಂದಿನ ಬಾರಿಗೆ ಬಜೆಟ್ ಮಂಢಿಸುವಾಗ ನೀವು ಎಲ್ಲಿರ್ತೀರಿ? ಅದರ ವಿವರ ಇಲ್ಲ. ಇದರ ಅರ್ಥ ಆರ್ಥಿಕ ಸ್ಥಿತಿ ಅಷ್ಟು ಸಮಾಧಾನಕರವಾಗಿ ಇಲ್ಲ ಅನ್ನೋದು. ಸರ್ಕಾರದ ಬಳಿ ಖರ್ಚು ಮಾಡಲು ಹಣ ಇಲ್ಲ. ಮೊದಲೇ ಕುಂಠಿತ ಆರ್ಥಿಕತೆ, ನಿರುದ್ಯೋಗ ಸಮಸ್ಯೆ ಇದೆ, ತೆರಿಗೆ ಸಂಗ್ರಹ ಸುಧಾರಿಸಿಲ್ಲ.
ಉದ್ಯೋಗ ಸೃಷ್ಟಿ ಬಗ್ಗೆ ಏನೂ ಮಾತಾಡ್ತಿಲ್ಲ. ಕಳೆದ ಬಾರಿ ಮಧ್ಯಂತರ ಬಜೆಟ್‌ಗಿಂತ ಮೊದಲು ದೇಶವೇ ರೋಮಾಂಚನಗೊಳ್ಳುವಂಥ ಆಯುಷ್ಮಾನ್ ಭಾರತ್, ಬುಲೆಟ್ ಟ್ರೇನ್, ಪಿಂಚಣಿ ಯೋಜನೆ, ಸ್ಮಾರ್ಟ್‌ಸಿಟಿಯಂಥ ಯೋಜನೆಗಳನ್ನು ಪ್ರಕಟಿಸಿದ್ದರು. ಈ ಬಜೆಟ್‌ನಲ್ಲಿ ಅವುಗಳ ಬಗ್ಗೆ ಏನಾದ್ರೂ ಹೇಳಬೇಕಿತ್ತು. ದೇಶದ ಇಷ್ಟು ನಗರಗಳು ಸ್ಮಾರ್ಟ್ ಆಗ್ತಿವೆ ಅನ್ನುವ ವಿವರ ಬಜೆಟ್ ಭಾಷಣದಲ್ಲಿ ಇರಬೇಕಿತ್ತು. ಅಂಥ ಗಮನಸೆಳೆಯುವ ಯಾವುದೇ ಯೋಜನೆ ಕಾಣಿಸ್ತಿಲ್ಲ.
ಮಹಾನಗರಗಳಲ್ಲಿನ ಮೆಟ್ರೊ ಯೋಜನೆಗಳ ಬಗ್ಗೆ ಒಂದು ಆಶಾದಾಯಕ ಬೆಳವಣಿಗೆಯಾಗಿ ಆಗ್ತಿದೆ. ಅದಕ್ಕೆ ಖಾಸಗಿಯವರು ಬಂಡವಾಳ ಹಾಕ್ತಾರೆ ಅಂತ ಇದೆ. ಆದರೆ ಅವರು ದುಡ್ಡು ಎಲ್ಲಿಂದ ತರ್ತಾರೆ ಎನ್ನುವ ಪ್ರಶ್ನೆ ಹಾಗೆಯೇ ಇದೆ. ಅವರು ಮತ್ತೆ ಬ್ಯಾಂಕ್‌ಗಳಿಂದ ಹಣ ತರಬೇಕು.
ಈಗ ಮತ್ತೆ ನಾವು ಬ್ಯಾಂಕ್‌ಗಳ ಬಗ್ಗೆ ಬರ್ತೀವಿ. ಅದು ಜನರ ದುಡ್ಡು. ಸಾರ್ವಜನಿಕ ಬ್ಯಾಂಕ್‌ಗಳಲ್ಲಿ 1 ಲಕ್ಷ ಕೋಟಿಯಷ್ಟು ಎನ್‌ಪಿಎ ಕಡಿಮೆಯಾಗಿದೆ. ಬರುವುದಿಲ್ಲ ಅಂದುಕೊಂಡಿದ್ದ ₹4 ಲಕ್ಷ ಕೋಟಿ ಸಾಲ ವಸೂಲಿ ಆಗಿದೆ. ಹೀಗಾಗಿ ₹70 ಸಾವಿರ ಕೋಟಿ ಹೆಚ್ಚುವರಿ ಬಂಡವಾಳವನ್ನು ಬ್ಯಾಂಕ್‌ಗಳಿಗೆ ಹಾಕ್ತೀವಿ ಅಂತ ಹೇಳಿದ್ರು. ಕಳೆದ 5 ವರ್ಷಗಳಲ್ಲಿ ₹5.58 ಲಕ್ಷ ಕೋಟಿ ಸಾಲವನ್ನು ಬ್ಯಾಂಕ್‌ಗಳಿಗೆ ವಜಾ ಮಾಡಿದ್ದಾರೆ. ಆದರೆ ಅದನ್ನು ಹೇಳಿಲ್ಲ. ಬಜೆಟ್ ಕದ್ದು ಮುಚ್ಚಿ ಇರಬಾರದು. ಬಜೆಟ್ ಅಂದ್ರೆ ಪಾರದರ್ಶಕವಾಗಿ ಹೇಳಬೇಕು.
100 ರೂಪಾಯಿ ಬಂದಿರುವುದು ಇಲ್ಲಿಂದ, 125 ರೂಪಾಯಿ ಇಲ್ಲಿಗೆ ಖರ್ಚು ಮಾಡ್ತೀವಿ. ಹೆಚ್ಚುವರಿ 25 ರೂಪಾಯಿ ಎಲ್ಲಿಂದ ತರ್ತೀವಿ ಅನ್ನುವ ಮಾಹಿತಿ ಬಜೆಟ್‌ನಲ್ಲಿ ಇರಬೇಕಿತ್ತು. ಇದೊಂದು ಗರಿಷ್ಠ ಉದ್ದೇಶದ ಕನಿಷ್ಠ ವಿವರಗಳಿರುವ ಬಜೆಟ್ ಅಂತ ಅನ್ನಿಸುತ್ತೆ.
ಈ ಸರ್ಕಾರದ ಕೆಲವು ಧೋರಣೆಗಳ ಬಗ್ಗೆ ಆಕ್ಷೇಪವಿದೆ. ಡಿಜಿಟಲ್ ಇಂಡಿಯಾ ಏಕೆ ಬೇಕು? ಆರೋಗ್ಯಯುವ ಆರ್ಥಿಕತೆ ಇರುವ ಹಲವು ದೇಶಗಳಲ್ಲಿ ನಗದು ವಹಿವಾಟು ಇದೆ. ಎಲ್ಲ ಡಿಜಿಟಲ್ ಮಾಡಬೇಕು ಅನ್ನೋದು ಏನಿದೆ? ಆಸ್ಟೇಲಿಯಾ, ಕೆನಡಾಗಳಲ್ಲಿ ಶೇ50 ಮತ್ತು ಜರ್ಮನಿಯಲ್ಲಿ ಶೇ80ರಷ್ಟು ನಗದು ವಹಿವಾಟು ಇದೆ. ನಗದು ವಹಿವಾಟು ಬೇಡ ಎನ್ನುವ ಹಟ ಏಕೆ ನಿಮಗೆ?
ಕಪ್ಪುಹಣದ ಚಲಾವಣೆ ನಿಲ್ಲಬೇಕು. ಪ್ರತಿಯೊಬ್ಬರ ಹಣದ ಚಲಾವಣೆ ಮೇಲೆ ನಿಗಾ ಇಡಬೇಕು ಅನ್ನುವುದು ಸರ್ಕಾರದ ಧೋರಣೆ. ಇದಕ್ಕಾಗಿ ಸರ್ಕಾರ ಬ್ಯಾಂಕ್ ಬಲಪಡಿಸಬೇಕು. ನಗದು ಓಡಾಟಕ್ಕೆ ಕಡಿವಾಣ ಹೆಚ್ಚಾದರೆ ಆರ್ಥಿಕತೆಗೆ ಹೊಡೆತ ಬೀಳುತ್ತೆ. ದುಡ್ಡು ಓಡಾಡದಿದ್ದರೆ ಬಳಕೆಯ ಪ್ರಮಾಣ ಕಡಿಮೆಯಾಗುತ್ತೆ. ಭಯ ಶುರುವಾಗುತ್ತೆ, ಜನರು ದುಡ್ಡು ಖರ್ಚು ಮಾಡಲು ಹೆದರ್ತಾರೆ. ನೋಟು ಅಮಾನ್ಯವಾದಾಗ ಇಂಥ ಬೆಳವಣಿಗೆಯನ್ನು ನಾವು ಗಮನಿಸಿದ್ದೇವೆ. ನಾವು ಜನರು ನಗದನ್ನು ದೈರ್ಯವಾಗಿ ಖರ್ಚು ಮಾಡುವ ವಾತಾವರಣ ಮೂಡಿಸಬೇಕು.
ವರ್ಷಕ್ಕೆ ₹1 ಕೋಟಿ ರೂಪಾಯಿ ನಗದು ಬ್ಯಾಂಕ್‌ನಿಂದ ತಗೊಂಡ್ರೆ ಶೇ2 ಟಿಡಿಎಸ್ ಅಂತ ಪ್ರಸ್ತಾವ ಇಟ್ಟಿದ್ದಾರೆ. ಇದು ಕಂಪನಿಗಳು ಹೂಡಿಕೆ ಕಡಿಮೆ ಮಾಡಲು ಕಾರಣವಾಗಬಹುದು. ಇದು ಕಂಪನಿಗಳ ಮೇಲೆ ಹೊರೆ ಹೆಚ್ಚಿಸುತ್ತೆ. ಆ ಹೊರೆ ಜನರಿಗೆ ವರ್ಗಾವಣೆಯಾಗುತ್ತೆ. ಇದು ಜನರ ಆರ್ಥಿಕ ಹೊರೆಯನ್ನು ಜಾಸ್ತಿ ಮಾಡುವ ಬಜೆಟ್ ಅಂತ ಅನ್ನಿಸ್ತಿದೆ. ದೊಡ್ಡ ಮಟ್ಟದ ಭರವಸೆ, ಮಹತ್ವಾಕಾಂಕ್ಷೆ ಹುಟ್ಟಿಸುವ ಯೋಜನೆಗಳೂ ಯಾವುದೂ ಕಾಣಿಸ್ತಿಲ್ಲ.
ಇದು ಆಕರ್ಷಕವಾದ ಘೋಷಣೆಗಳನ್ನು ಮಾಡುವ ಸರ್ಕಾರ. ಎಲ್‌ಇಡಿ ಬಲ್ಬ್ ಬಗ್ಗೆ ಹೇಳಿದ್ರು. ಅದರಿಂದ ₹18,300 ಕೋಟಿ ಉಳಿತಾಯ ಆಗಿದೆ ಅಂತ ಹೇಳ್ತಿದ್ದಾರೆ. ಆದರೆ ನಿಜವಾಗಿ ಅಷ್ಟು ಉಳಿತಾಯ ಸಾಧ್ಯವೇ ಎನ್ನುವ ಪ್ರಶ್ನೆಗಳು ಇವೆ. ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಸರ್ಕಾರದ್ದು ಮಹತ್ವಾಕಾಂಕ್ಷಿ ಯೋಜನೆ ಅಂತ ಒಪ್ಪಿಕೊಳ್ಳಬೇಕು. ಅದು ಅನಿವಾರ್ಯ ಮತ್ತು ಅಗತ್ಯ ಆಗಿತ್ತ. ಜನ ಸಾಮಾನ್ಯರಿಗೆ ಕೈಗೆಟುಕುವ ಮನೆಗಳ ಬಗ್ಗೆ ಇದು ಉತ್ತಮ ಪ್ರಯತ್ನ.
ಜನರನ್ನು ಷೇರುಪೇಟೆಯತ್ತ ಎಳೆಯಲು ಕಂಪನಿಗಳಲ್ಲಿರುವ ಸಾರ್ವಜನಿಕರ ಪಾಲು ಬಂಡವಾಳವನ್ನು ಶೇ20ರಷ್ಟು ಜಾಸ್ತಿ ಮಾಡಲು ಅವಕಾಶ ಕೊಡ್ತೀವಿ ಅಂತ ಹೇಳಿದ್ದಾರೆ. ಕಂಪನಿಗಳ ಮಾಲೀಕರ ಬಂಡವಾಳದ ಪ್ರಮಾಣವನ್ನು ಶೇ80ರಿಂದ ಶೇ60ಕ್ಕೆ ಇಳಿಸ್ತೀವಿ ಅಂತ ಹೇಳಿದ್ದಾರೆ. ಅದರಿಂದ ವಿದೇಶಿ ಹೂಡಿಕೆ ಕಡಿಮೆಯಾಗುವ ಸಾಧ್ಯತೆ ಇದೆ.
ಬಜೆಟ್‌ನಲ್ಲಿ ಜನ ಸಾಮಾನ್ಯರು, ವೇತನ ವರ್ಗ, ಮಧ್ಯಮ ವರ್ಗದವರಿಗೆ ಹೆಚ್ಚು ದುಡ್ಡು ಖರ್ಚು ಮಾಡಲು ಅವಕಾಶ ಮಾಡಿಕೊಟ್ಟಿಲ್ಲ ಎನ್ನುವ ಆಕ್ಷೇಪವಿದೆ. ಜನರ ಖರ್ಚು ಜಾಸ್ತಿಯಾಗುತ್ತೆ. ಎಲ್ಲ ಗೃಹಿಣಿಯರ ಮನೆ ಬಜೆಟ್ ಏರಿಕೆಯಾಗುತ್ತೆ. ಇನ್ನು ಮೂರ್ನಾಲ್ಕು ತಿಂಗಳ ನಂತರ ಅದರ ನಂತರ ಲೆಕ್ಕ ಸಿಗುತ್ತೆ. ಇಂಧನ ಬೆಲೆ ಏರಿಕೆಯಿಂದ ಎಲ್ಲ ವಸ್ತುಗಳ ಬೆಲೆಗಳೂ ಹೆಚ್ಚಾಗುತ್ತವೆ. ಅದರಿಂದಾಗುವ ಹಣದುಬ್ಬರ ಕಡಿಮೆ ಮಾಡಲು ಹೇಗೆ ಬಂಡವಾಳ ತರ್ತಾರೆ ಅಂತ ನೋಡಬೇಕು.
ಕಳೆದ ಎರಡು–ಮೂರು ವರ್ಷಗಳಿಂದ ಆರ್ಥಿಕ ವಿಚಾರದಲ್ಲಿ ಒಂದು ದೊಡ್ಡ ಸರ್ಕಸ್ ನಡೀತಿದೆ. ಈ ಸರ್ಕಾರ ವಿತ್ತೀಯ ಕೊರತೆಯನ್ನು ಐದು ವರ್ಷಗಳಿಂದ ನಿಯಂತ್ರಣದಲ್ಲಿ ಇರಿಸಿದೆ. ಅದರಲ್ಲಿ ಯಶಸ್ಸನ್ನೂ ಪಡೆದುಕೊಂಡಿದೆ. ಜಿಡಿಪಿಯ ಶೇ3.4ರಿಂದ ಶೇ3.3ಕ್ಕೆ ಇಳಿಸಿದೆ. ಅದು ಆರೋಗ್ಯಪೂರ್ಣ ಆರ್ಥಿಕತೆಯನ್ನು ಸಂಕೇತಿಸುತ್ತೆ. ಈ ಸರ್ಕಸ್‌ನಲ್ಲಿ ನೀವು ಅರ್ಥಿಕತೆಯನ್ನು ಚೇತರಿಸುವ ಕ್ರಮಗಳನ್ನು ಘೋಷಿಸಬೇಕಿತ್ತು. ಅಂಥ ಚಟುವಟಿಕೆಗಳು ಕಾಣಿಸ್ತಿಲ್ಲ.
ಆರ್ಥಿಕತೆ ಸುಧಾರಿಸಬೇಕು ಅಂದ್ರೆ ಸರ್ಕಾರದ ವೆಚ್ಚ ಹೆಚ್ಚಾಗಬೇಕು. ಆದರೆ ಅಂಥ ಪ್ರಯತ್ನ ಎಲ್ಲಿ ನಡೀತಾ ಇದೆ ಆಂತ ಗೊತ್ತಾಗ್ತಿಲ್ಲ. ಬಂಡವಾಳ ಹಿಂಪಡೆಯುವುದರ ಪರಿಣಾಮದ ಬಗ್ಗೆಯೂ ನಾವು ಯೋಚಿಸಬೇಕು. ದೇಶದಲ್ಲಿ ಈಗ ಉಳ್ಳವರ ಮತ್ತು ಇಲ್ಲದವರ ನಡುವೆ ಅಂತ ಜಾಸ್ತಿ ಆಗ್ತಿದೆ. ಯಾರೋ ಕೆಲವೇ ಉದ್ಯಮಿಗಳ ಹಿಡಿತದಲ್ಲಿ ಕೈಗಾರಿಕೆಗಳು ಸಿಲುಕುತ್ತಿವೆ. ಮಿಶ್ರ ಆರ್ಥಿಕತೆಯ ಸಮಾಜವಾದಿ ಮಾದರಿಯಿಂದ ಸಂಪೂರ್ಣ ಖಾಸಗೀಕರಣವಾದ ಅಮೆರಿಕ ಮಾದರಿಯತ್ತ ನಾವು ಸಾಗುತ್ತಿದ್ದೇವೆ ಅನ್ನಿಸ್ತಿದೆ. ಇದು ಎನ್‌ಡಿಎ ಸರ್ಕಾರದ ನೀತಿಗಳಿಗೆ ಸಂಬಂಧಿಸಿದ್ದೂ ಹೌದು. ಇದು ಆರ್ಥಿಕ ತಾರತಮ್ಯದ ಪರಿಸ್ಥಿತಿಯನ್ನೂ ಕ್ರಮೇಣ ಸೃಷ್ಟಿಸುತ್ತೆ.
ವಿದ್ಯುತ್ ಚಾಲಿತ ವಾಹನಗಳನ್ನು ಆದಾಯ ತೆರಿಗೆಗೆ ಜೋಡಿಸಿದ್ದು ಒಳ್ಳೆಯ ಕ್ರಮ. ಮೇಲ್ನೋಟಕ್ಕೆ ಇದು ಹಣದುಬ್ಬರ ನಿಯಂತ್ರಣ, ವಿತ್ತೀಯ ಕೊರತೆ ಕಡಿವಾಣಕ್ಕೆ ದೊಡ್ಡ ಸರ್ಕಸ್ ಆದಂತೆ ಕಾಣಿಸ್ತಿದೆ.
ಇವನ್ನೂ ಓದಿ...
ಈ ವಿಡಿಯೊಗಳನ್ನೂ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.