ಭೋಪಾಲ್: ಮಧ್ಯಪ್ರದೇಶ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ 230 ಜನಪ್ರತಿನಿಧಿಗಳ ಪೈಕಿ 205 ಮಂದಿ ಶಾಸಕರು ಕೋಟ್ಯಧಿಪತಿಗಳು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ವರದಿ ಮಾಡಿದೆ.
ಮಧ್ಯಪ್ರದೇಶದಲ್ಲಿ ಶಾಸಕರ ಸರಾಸರಿ ಆಸ್ತಿ ₹11.77 ಕೋಟಿ ಆಗಿದೆ.
230 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ. ಅಧಿಕಾರ ಉಳಿಸಿಕೊಂಡಿರುವ ಬಿಜೆಪಿ ಒಟ್ಟು 163 ಸ್ಥಾನಗಳಲ್ಲಿ ಜಯ ಗಳಿಸಿದೆ. 2018ರಲ್ಲಿ ಬಿಜೆಪಿ 109 ಸ್ಥಾನ ಗಳಿಸಿತ್ತು. ಕಾಂಗ್ರೆಸ್ 66 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿದೆ.
ಸಿರಿವಂತ ಶಾಸಕ...
ರತ್ಲಾಮ್ ನಗರ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿರುವ ಬಿಜೆಪಿ ಶಾಸಕ ಚೈತನ್ಯ ಕಶ್ಯಪ್ ₹296 ಕೋಟಿ ಆಸ್ತಿ ಹೊಂದಿದ್ದು, ಸಿರಿವಂತ ಶಾಸಕ ಎನಿಸಿದ್ದಾರೆ. ಬಿಜೆಪಿ ಪಕ್ಷದವರೇ ಆಗಿರುವ ಶಾಸಕ ಸಂಜಯ್ ಸತ್ಯೇಂದ್ರ ಪಾಠಕ್ ₹242 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಎಂದು ಎಡಿಆರ್ ವರದಿ ತಿಳಿಸಿದೆ.
ಮಧ್ಯಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷ ಕಮಲ್‌ನಾಥ್ ಅಗ್ರ ಮೂರು ಕೋಟ್ಯಿಧೀಶರ ಪಟ್ಟಿಯಲ್ಲಿ (₹134 ಕೋಟಿ) ಕಾಣಿಸಿಕೊಂಡಿದ್ದಾರೆ.
ಮಧ್ಯಪ್ರದೇಶದಲ್ಲಿ 2018ರಲ್ಲಿ ₹1 ಕೋಟಿಗೂ ಅಧಿಕ ಅಸ್ತಿ ಹೊಂದಿರುವ ಶಾಸಕರ ಸಂಖ್ಯೆ 187 ಆಗಿತ್ತು. ಈ ಸಂಖ್ಯೆ 205ಕ್ಕೆ ಏರಿಕೆಯಾಗಿದೆ. ಈ ಪೈಕಿ ಬಿಜೆಪಿಯ 144 ಹಾಗೂ ಕಾಂಗ್ರೆಸ್‌ನ 61 ಶಾಸಕರು ಇದ್ದಾರೆ.
ಅತಿ ಕಡಿಮೆ ಆಸ್ತಿ ಹೊಂದಿರುವ ಶಾಸಕ..
ವಿಧಾನಸಭೆಗೆ ಆಯ್ಕೆಯಾಗಿರುವ ಭಾರತ್ ಆದಿವಾಸಿ ಪಕ್ಷದ ಏಕಮಾತ್ರ ಶಾಸಕ ಕಮಲೇಶ್ ದೊಡಿಯಾರ್, ಅತಿ ಕಡಿಮೆ ಅಸ್ತಿ ಹೊಂದಿರುವ ಶಾಸಕ. ಅವರ ಆಸ್ತಿ ಮೌಲ್ಯ 18 ಲಕ್ಷ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.