ADVERTISEMENT

ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಘೋಷಿಸಿದ ಮೋದಿ: ಕಾನೂನು ರದ್ದುಗೊಳಿಸುವುದು ಹೇಗೆ?

ಡೆಕ್ಕನ್ ಹೆರಾಲ್ಡ್
Published 19 ನವೆಂಬರ್ 2021, 11:02 IST
Last Updated 19 ನವೆಂಬರ್ 2021, 11:02 IST
ರೈತರ ಪ್ರತಿಭಟನೆಯ ಸಂಗ್ರಹ ಚಿತ್ರ (ಕೃಪೆ – ಪಿಟಿಐ)
ರೈತರ ಪ್ರತಿಭಟನೆಯ ಸಂಗ್ರಹ ಚಿತ್ರ (ಕೃಪೆ – ಪಿಟಿಐ)   

ನವದೆಹಲಿ: ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದು, ಕಾಯ್ದೆಗಳ ಅನುಕೂಲಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.

ಸದ್ಯದಲ್ಲೇ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಮೂರು ಕೃಷಿ ಕಾಯ್ದೆಗಳ ರದ್ದತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ ಎಂದೂ ಪ್ರಧಾನಿ ತಿಳಿಸಿದ್ದಾರೆ. ಕಾಯ್ದೆಗಳನ್ನು ರದ್ದುಗೊಳಿಸಬೇಕಿದ್ದರೆ ಸರ್ಕಾರ ಯಾವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು? ತಜ್ಞರ ಅಭಿಪ್ರಾಯಗಳು ಇಲ್ಲಿವೆ;

ಹೊಸ ಮಸೂದೆಯ ಮಂಡನೆ ಅಗತ್ಯ

ADVERTISEMENT

ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕಾಗಿ ಸರ್ಕಾರವು ಸಂಸತ್‌ನಲ್ಲಿ ಮಸೂದೆ ಮಂಡನೆ ಮಾಡಬೇಕಾಗುತ್ತದೆ ಎಂದು ಸಂವಿಧಾನ ಹಾಗೂ ಕಾನೂನು ತಜ್ಞರು ಹೇಳಿದ್ದಾರೆ.

‘ಕಾನೂನೊಂದನ್ನು ಅನುಷ್ಠಾನಕ್ಕೆ ತರಬೇಕಿದ್ದರೆ ಸಂವಿಧಾನದ ಅಡಿಯಲ್ಲಿ ಏನೇನು ಪ್ರಕ್ರಿಯೆಗಳನ್ನು ಕೈಗೊಳ್ಳಬೇಕೋ ಅವೆಲ್ಲವನ್ನೂ ರದ್ದತಿಗೂ ಮಾಡಬೇಕಾಗುತ್ತದೆ’ ಎಂದು ಕೇಂದ್ರ ಕಾನೂನು ಕಾರ್ಯದರ್ಶಿ ಪಿ.ಕೆ.ಮಲ್ಹೋತ್ರಾ ತಿಳಿಸಿದ್ದಾರೆ.

ಮೂರು ಕೃಷಿ ಕಾಯ್ದೆಗಳ ರದ್ದತಿಗಾಗಿ ಸರ್ಕಾರವು ಮಸೂದೆ ಮಂಡನೆ ಮಾಡಬೇಕಾಗುತ್ತದೆ. ಬೇರೆ ದಾರಿಯಿಲ್ಲ ಎಂದು ಲೋಕಸಭೆಯ ಮಾಜಿ ಕಾರ್ಯದರ್ಶಿ ಪಿ.ಡಿ.ಟಿ.ಆಚಾರ್ಯ ಹೇಳಿದ್ದಾರೆ.

ಒಂದು ಮಸೂದೆ ಮಂಡನೆ ಮಾಡುವ ಮೂಲಕ ಕೇಂದ್ರ ಸರ್ಕಾವು ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬಹುದು. ರದ್ದತಿಗೆ ಕಾರಣವೇನು ಎಂಬುದನ್ನೂ ಸರ್ಕಾರ ಉಲ್ಲೇಖಿಸಬಹುದು ಎಂದು ಆಚಾರ್ಯ ಹೇಳಿದ್ದಾರೆ.

ರದ್ದತಿ ಮಸೂದೆ ಮಂಡನೆ ಮಾಡಿದಾಗ ಅದೂ ಒಂದು ಕಾನೂನಾಗಿ ಪರಿಗಣಿತವಾಗುತ್ತದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ರದ್ದಾಗಲಿರುವ ಕಾಯ್ದೆಗಳು ಯಾವುದೆಲ್ಲ?

ಪ್ರಧಾನಿಯವರು ಮಾಡಿರುವ ಘೋಷಣೆ ಪ್ರಕಾರ, ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು) ಕಾಯ್ದೆ – 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಮತ್ತು ಕೃಷಿ ಜಮೀನು ಸೇವೆಗಳ ಒಪ್ಪಂದ ಕಾಯ್ದೆ –2020, ಅಗತ್ಯ ವಸ್ತುಗಳ ಕಾಯ್ದೆ (1955ಕ್ಕೆ ತಂದಿರುವ ತಿದ್ದುಪಡಿ), ಇವುಗಳು ರದ್ದಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.