ಮುಂಬೈ: ನರ್ಸರಿಗೆ ಹೋಗುವ ಮೂರು ಹಾಗೂ ನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ 23 ವರ್ಷದ ಸ್ವಚ್ಛತಾ ಕಾರ್ಮಿಕನೊಬ್ಬ ಬಾಲಕಿಯರ ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮಹಾರಾಷ್ಟ್ರದಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಠಾಣೆ ಜಿಲ್ಲೆಯ ಬದ್ಲಾಪುರ ಪ್ರದೇಶದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ದೌರ್ಜನ್ಯವನ್ನು ಖಂಡಿಸಿ, ಸಾರ್ವಜನಿಕರು ಮಂಗಳವಾರ ಬದ್ಲಾಪುರ ರೈಲು ನಿಲ್ದಾಣದಲ್ಲಿ ‘ರೈಲು ತಡೆ’ ನಡೆಸಿದರು. ಈ ವೇಳೆ ಸಾವಿರಾರು ಜನರು ಜಮಾವಣೆಗೊಂಡಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಶಾಲೆಯೊಳಗೇ ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹತ್ಯೆ ಪ್ರಕರಣಕ್ಕಿಂತ ದೊಡ್ಡ ಪ್ರಕರಣವಾಗಿದೆ-ವಿಜಯ್ ವಡೆಟ್ಟೀವರ್, ವಿಧಾನಸಭೆ ವಿರೋಧ ಪಕ್ಷದ ನಾಯಕ
ಶಾಲೆಯ ಆಡಳಿತ ಮಂಡಳಿಯು ಪ್ರಕರಣದ ಕುರಿತು ನಿರ್ಲಕ್ಷ್ಯವಹಿಸಿದರೆ ಅಪರಾಧಿಗಳನ್ನು ರಕ್ಷಿಸುವ ಕೆಲಸ ಮಾಡಿದರೆ ಶಾಲೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು-ಏಕನಾಥ ಶಿಂಧೆ, ಮುಖ್ಯಮಂತ್ರಿ
ರೈಲು ತಡೆ ನಡೆಸುತ್ತಿರುವವರು ಯಾರೂ ಬದ್ಲಾಪುರದ ಜನರಲ್ಲ. ಅವರೆಲ್ಲರೂ ವಿರೋಧ ಪಕ್ಷಗಳ ಕಾರ್ಯಕರ್ತರು. ಜನರನ್ನು ಪಕ್ಕದ ಹಳ್ಳಿಗಳಿಂದ ಕರೆತರಲಾಗಿದೆ-ಕಿಶನ್ ಕಥೋರೆ, ಬಿಜೆಪಿ ಶಾಸಕ
ಲಾಡ್ಲಿ ಬೆಹನಾ ಯೋಜನೆ ಜಾರಿ ಮಾಡುತ್ತಾರೆ. ಆದರೆ ಇಲ್ಲಿ ಮಕ್ಕಳು–ಮಹಿಳೆಯರಿಗೆ ರಕ್ಷಣೆ ಇಲ್ಲ. ಮಹಿಳೆಯರ ಮೇಲಾಗುವ ಅಪರಾಧಗಳನ್ನು ಇಟ್ಟುಕೊಂಡು ಕೆಲವೇ ರಾಜ್ಯಗಳನ್ನು ಗುರಿಯಾಗಿಸಲಾಗುತ್ತದೆ-ಉದ್ಧವ್ ಠಾಕ್ರೆ, ಮುಖ್ಯಸ್ಥ ಶಿನಸೇನಾ (ಉದ್ಧವ್ ಬಣ)
ಏನಿದು ಘಟನೆ?
‘ಆಗಸ್ಟ್ 12 ಮತ್ತು 13ರಂದು ಈ ಘಟನೆ ನಡೆದಿದೆ. ಬೆಳಿಗ್ಗೆಯ ಮೊದಲ ತರಗತಿ ಮುಗಿದ ಬಳಿಕ ಬಾಲಕಿಯರು ಶೌಚಾಲಯಲಕ್ಕೆ ತೆರಳಿದ್ದಾರೆ. ಈ ವೇಳೆ ಆರೋಪಿಯು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ’ ಎಂದು ಮಾಧ್ಯಮಗಳು ವರದಿ ಪ್ರಕಟಿಸಿವೆ. ‘ಆಗಸ್ಟ್ 15ರಂದು ನಾಲ್ಕು ವರ್ಷದ ಬಾಲಕಿಯು ತನ್ನ ಖಾಸಗಿ ಅಂಗದಲ್ಲಿ ನೋವಾಗುತ್ತಿರುವ ಕುರಿತು ಪೋಷಕರಿಗೆ ತಿಳಿಸಿದ್ದಾಳೆ. ತುಸು ಹೆಚ್ಚು ವಿಚಾರಿಸಿದಾಗ ತನ್ನ ಸ್ನೇಹಿತೆಗೂ ಇದೇ ರೀತಿ ಆಗಿರುವುದಾಗಿ ಆಕೆ ತಿಳಿಸಿದ್ದಾಳೆ. ಪೋಷಕರು ಮೂರು ವರ್ಷದ ಬಾಲಕಿಯ ಪೋಷಕರನ್ನು ವಿಚಾರಿಸಿದ್ದಾರೆ. ಆಗ ಅವರು ‘ಹೌದು ನಮ್ಮ ಮಗಳೂ ಎರಡು ಮೂರು ದಿನಗಳಿಂದ ಶಾಲೆಗೆ ಹೋಗಲು ಹೆದರುತ್ತಿದ್ದಾಳೆ’ ಎಂದಿದ್ದಾರೆ’ ಎಂದು ವರದಿಗಳಲ್ಲಿ ಹೇಳಲಾಗಿದೆ.
ಎಫ್‌ಐಆರ್ ದಾಖಲಿಸಲು 11 ತಾಸು ವಿಳಂಬ
‘ಖಾಸಗಿ ಕ್ಲಿನಿಕ್‌ವೊಂದರಲ್ಲಿ ತಮ್ಮ ಮಕ್ಕಳ ವೈದ್ಯಕೀಯ ಪರೀಕ್ಷೆಯನ್ನು ಪೋಷಕರು ಮಾಡಿಸುತ್ತಾರೆ. ಲೈಂಗಿಕ ದೌರ್ಜನ್ಯ ನಡೆದಿರುವುದು ಪರೀಕ್ಷೆಯಲ್ಲಿ ದೃಢಪಡುತ್ತದೆ. ಬಳಿಕ ಪೋಷಕರು ಪೋಲಿಸ್ ಠಾಣೆಗೆ ದೂರು ನೀಡಲು ಹೋಗುತ್ತಾರೆ. ಆದರೆ ಠಾಣೆಯ ಇನ್‌ಸ್ಟೆಕ್ಟರ್ ಶುಭದಾ ಶಿತೋಲೆ ಎಂಬುವರು ಪೋಕ್ಸೊ ಕಾಯ್ದೆ ಅಡಿ ದೂರು ದಾಖಲಿಸಿಕೊಳ್ಳಲು ನಿರಾಕರಿಸುತ್ತಾರೆ’ ಎಂದು ಮಾಧ್ಯಮಗಳು ವರದಿ ಮಾಡಿವೆ. ‘ನಿಮ್ಮ ಆರೋಪಗಳನ್ನು ಖಚಿತಪಡಿಸಿಕೊಳ್ಳದೇ ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶುಭದಾ ಹೇಳಿದ್ದಾರೆ. 11 ತಾಸುಗಳವರೆಗೆ ಪೋಷಕರನ್ನು ಠಾಣೆಯಲ್ಲಿಯೇ ಕಾಯಿಸಿದ ಬಳಿಕ ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಶುಭದಾ ಅವರು ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳುತ್ತಾರೆ. ಆಗಸ್ಟ್ 17ರಂದು ಆರೋಪಿಯನ್ನು ಬಂಧಿಸಲಾಗುತ್ತದೆ’ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಶುಭದಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಪೊಲೀಸರು ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದ ಕುರಿತು ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗವು ಗಮನ ಹರಿಸಿದ್ದು ‘ಯಾಕಾಗಿ ದೂರು ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡಲಾಯಿತು’ ಎಂದು ಪ್ರಶ್ನಿಸಿದೆ. ಘಟನೆ ಕುರಿತು ತನಿಖೆ ನಡೆಸಲು ಆಯೋಗದ ತಂಡವೊಂದು ಬದ್ಲಾಪುರಕ್ಕೆ ತೆರಳಿದೆ.
ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ ಘಟನೆ
ಪುರುಷ ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ಬಾಲಕಿಯರ ಶೌಚಾಲಯದ ನಿರ್ವಹಣೆಯ ಜವಾಬ್ದಾರಿಯನ್ನು ಯಾಕೆ ನೀಡಲಾಗಿತ್ತು. ಮಹಿಳಾ ಸ್ವಚ್ಛತಾ ಕಾರ್ಮಿಕರನ್ನು ಏಕೆ ನೇಮಕ ಮಾಡಿಕೊಂಡಿರಲಿಲ್ಲ
ದೂರು ದಾಖಲಾದ ಬಳಿಕ ಪೊಲೀಸರು ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಈ ವೇಳೆ ಶಾಲೆಯಲ್ಲಿರುವ ಯಾವ ಸಿಸಿಟಿವಿ ಕ್ಯಾಮೆರಾಗಳೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ಶಾಲೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಹಾಗೂ ಅವನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂಬ ಕಠಿಣ ನಿಯಮವಿದ್ದರೂ ಯಾಕಾಗಿ ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ನಿಂತಿದ್ದವು
ರೈಲು ತಡೆ: ತೀವ್ರಗೊಂಡ ಪ್ರತಿಭಟನೆ
ಆರೋಪಿಯ ಬಂಧನದ ಬಳಿಕ ಶಾಲೆಯ ಆಡಳಿತ ಮಂಡಳಿಯು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಆಕ್ರೋಶಗೊಂಡ ಸಂತ್ರಸ್ತ ಬಾಲಕಿಯರ ಪೋಷಕರು ಮಂಗಳವಾರ ಬೆಳಿಗ್ಗೆಯೇ ಇತರ ಪೋಷಕರು ಸ್ಥಳೀಯರೊಂದಿಗೆ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು. ನಂತರ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸತೊಡಗಿದರು. ಆಕ್ರೋಶಗೊಂಡಿದ್ದ ಜನರು ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಕಿಟಕಿ ಗಾಜುಗಳನ್ನು ಒಡೆದರು. ನಂತರ ಸಾವಿರಾರು ಸಾರ್ವಜನಿಕರು ಬದ್ಲಾಪುರ ರೈಲು ನಿಲ್ದಾಣದಲ್ಲಿ ಜಮಾವಣೆಗೊಂಡು ‘ರೈಲು ತಡೆ’ ನಡೆಸಿದರು. ಸುಮಾರು 10 ಪ್ರಮುಖ ರೈಲುಗಳ ಸಂಚಾರ ಮಾರ್ಗಗಳನ್ನು ಬದಲಿಸಲಾಯಿತು. ಪ್ರಯಾಣಿಕರ ಅನುಕೂಲಕ್ಕೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ರೈಲು ತಡೆ ನಿಲ್ಲಿಸಲು ಪೊಲೀಸರು ಹಾಗೂ ಮುಖ್ಯಮಂತ್ರಿ ಅವರ ಮನವಿಯ ಬಳಿಕವೂ ಪ್ರತಿಭಟನೆಯನ್ನು ಜನರು ನಿಲ್ಲಿಸಲಿಲ್ಲ. ಸುಮಾರು ಆರು ತಾಸು ಪ್ರತಿಭಟನೆ ನಡೆದಿದೆ. ‘ಬಾಲಕಿಯರಿಗೆ ನ್ಯಾಯ ನೀಡಿ’ ‘ತಪ್ಪಿತಸ್ಥರನ್ನು ನೇಣಿಗೆ ಹಾಕಿ’ ಎಂದು ಪ್ರತಿಭಟನನಿರತರು ಘೋಷಣೆಗಳನ್ನು ಕೂಗಿದರು. ವಿವಿಧ ಸಂಘಟನೆಗಳು ಬದ್ಲಾಪುರ ಬಂದ್‌ಗೂ ಕರೆ ನೀಡಿದ್ದವು.
ಪ್ರತಿಭಟನೆಯ ಬಳಿಕ ಸರ್ಕಾರ ಕೈಗೊಂಡ ಕ್ರಮಗಳು
ಐಜಿಪಿ ಆರತಿ ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚನೆ
ವ್ಯಕ್ತಿಯು ಮೇಲೆ ಪೋಕ್ಸೊ ಕಾಯ್ದೆ ಅಡಿಯಲ್ಲಿ ಹಾಗೂ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸಲು ಸೂಚಿಸಿದ ಮುಖ್ಯಮಂತ್ರಿ ಏಕನಾಥ ಶಿಂಧೆ
ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲಾಗುವುದು. ಜೊತೆಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಲಾಗುವುದು
ಪೋಷಕರ ದೂರಿನ ತನಿಖೆಯಲ್ಲಿ ವಿಳಂಬ ಧೋರಣೆ ಅನುಸರಿಸಿದ ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರ ಅಮಾನತು
ಪ್ರಾಂಶುಪಾಲ ಅಮಾನತು: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಶಾಲೆಯ ಆಡಳಿತ ಮಂಡಳಿಯು ಶಾಲೆಯ ಪ್ರಾಂಶುಪಾಲ ಶಿಕ್ಷಕಿ ಮಹಿಳಾ ಸಹಾಯಕಿಯೊಬ್ಬರನ್ನು ಅಮಾನತು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.