ADVERTISEMENT

ಉದಯಪುರ: ಹಳಿಯಲ್ಲಿ ಸ್ಫೋಟ– ಎನ್‌ಐಎ, ಇತರೆ ಸಂಸ್ಥೆಗಳಿಂದ ತನಿಖೆ

ಪಿಟಿಐ
Published 14 ನವೆಂಬರ್ 2022, 2:37 IST
Last Updated 14 ನವೆಂಬರ್ 2022, 2:37 IST
   

ಅಹಮದಾಬಾದ್: ಇತ್ತೀಚೆಗೆ ಉದ್ಘಾಟನೆಗೊಂಡಿದ್ದ ಅಸರ್ವಾ-ಉದಯಪುರ ಎಕ್ಸ್‌ಪ್ರೆಸ್ ರೈಲು ಹಾದುಹೋಗುವ ಕೆಲವು ಗಂಟೆಗಳ ಮೊದಲು ಭಾನುವಾರ ಉದಯಪುರದ ರೈಲ್ವೆ ಹಳಿಯಲ್ಲಿ ಸ್ಫೋಟ ಸಂಭವಿಸಿದೆ. ಘಟನೆ ಕುರಿತಂತೆ ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉದಯಪುರದ ಜವಾರ್ ಮೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕೆವ್ಡಾ ಕಿ ನಾಲ್ ಬಳಿಯ ಓಧಾ ಸೇತುವೆಯಲ್ಲಿ ಸ್ಫೋಟ ಸಂಭವಿಸಿದ್ದು, ಇದಕ್ಕೆ ಗಣಿ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸ್ಥಳೀಯರು ಬೆಳಿಗ್ಗೆ ಸ್ಫೋಟದ ಬಗ್ಗೆ ನಮಗೆ ಮಾಹಿತಿ ನೀಡಿದರು. ನಾವು ಹಳಿಯಲ್ಲಿ ಕೆಲವು ಸ್ಫೋಟಕಗಳನ್ನು ಪತ್ತೆಮಾಡಿದ್ದೇವೆ. ದುಷ್ಕರ್ಮಿಗಳ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ’ಎಂದು ಠಾಣಾಧಿಕಾರಿ ಅನಿಲ್ ಕುಮಾರ್ ಬಿಷ್ಣೋಯಿ ಹೇಳಿದರು.

ADVERTISEMENT

ಉದಯಪುರದಿಂದ ಸುಮಾರು 35 ಕಿ.ಮೀ ದೂರದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಎಟಿಎಫ್, ಎನ್‌ಐಎ ಮತ್ತು ಆರ್‌ಪಿಎಫ್ ತಂಡಗಳನ್ನು ಕಳುಹಿಸಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಸೇತುವೆ ಮರು ನಿರ್ಮಾಣ ತಂಡವು ಸ್ಥಳದಲ್ಲಿ ಕಾರ್ಯಾಚಾರಣೆ ನಡೆಸುತ್ತಿವೆ. ಘಟನೆಯು ಆತಂಕಕಾರಿ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹೇಳಿದ್ದು, ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಅವರಿಗೆ ಆದೇಶಿಸಿದ್ದಾರೆ.

ಕೇಂದ್ರೀಯ ಸಂಸ್ಥೆಗಳು ತನಿಖೆಗೆ ಸಹಕಾರ ನೀಡುತ್ತಿವೆ ಎಂದು ಡಿಜಿಪಿ ತಿಳಿಸಿದ್ದಾರೆ.

ವಿಧಿ ವಿಜ್ಞಾನ, ಭಯೋತ್ಪಾದನೆ ನಿಗ್ರಹ ದಳವು(ಎಟಿಎಸ್) ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿವೆ.

‘ಸೂಪರ್‌ಪವರ್ 90’ಡೆಟೊನೇಟರ್ ಅನ್ನು ಸ್ಪೋಟಕ್ಕೆ ಬಳಸಲಾಗಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘ಅತ್ಯಂತ ಯೋಜಿತವಾಗಿ ಸ್ಫೋಟದ ಸಂಚು ರೂಪಿಸಲಾಗಿದೆ. ಸ್ಥಳೀಯರು ಎಚ್ಚರಿಸಿದ್ದರಿಂದ ಭಾರೀ ಅವಘಡ ತಪ್ಪಿದೆ’ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.