ಚೆನ್ನೈ: ಪರಿಶಿಷ್ಟ ವರ್ಗದ(ಎಸ್‌ಸಿ) ಮೀಸಲಾತಿ ಅಡಿಯಲ್ಲಿ ದಲಿತ ಕ್ರಿಶ್ಚಿಯನ್ನರನ್ನು ತರುವ ನಿಟ್ಟಿನಲ್ಲಿ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ಮಾಡಲು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಮೂಲಕ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅವರಿಗೆ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಬೇಕು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಾದಿಸಿದ್ದಾರೆ.
'ಭಾರತೀಯ ಸಂವಿಧಾನದ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನರಿಗೆ ನೀಡಲಾಗುವ ಮೀಸಲಾತಿಯನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ ಅಗತ್ಯವಾದ ತಿದ್ದುಪಡಿಗಳನ್ನು ಮಾಡಲು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ತಮಿಳುನಾಡು ವಿಧಾನಸಭೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಈ ಮೂಲಕ ಎಲ್ಲ ರೀತಿಯಿಂದಲೂ ಅವರಿಗೆ ಸಾಮಾಜಿಕ ನ್ಯಾಯದ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಲಾಗಿದೆ’ ಎಂದು ಸ್ಟಾಲಿನ್ ಮಂಡಿಸಿದ ನಿರ್ಣಯದಲ್ಲಿ ತಿಳಿಸಲಾಗಿದೆ..
ಕ್ರೈಸ್ತ ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ದಲಿತರಿಗೆ ಮೀಸಲಾತಿ ಪ್ರಯೋಜನಗಳನ್ನು ವಿಸ್ತರಿಸುವ ಕುರಿತಂತೆ ಕೇಂದ್ರ ಸರ್ಕಾರದ ವಿರೋಧದ ನಡುವೆಯೇ ತಮಿಳುನಾಡು ಸರ್ಕಾರ ಈ ನಿರ್ಣಯ ಕೈಗೊಂಡಿದೆ.
ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೂ ಮೀಸಲಾತಿ ನೀಡಬೇಕು ಎಂದು ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ನೇತೃತ್ವದ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಆಯೋಗ ಮಾಡಿರುವ ಶಿಫಾರಸುಗಳನ್ನು ಜಾರಿಗೆ ತರಲು ಸಿದ್ಧವಿಲ್ಲ ಎಂದು ಕೇಂದ್ರವು ಡಿಸೆಂಬರ್ 2022ರಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಕೇಂದ್ರವು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಿದೆ.
ಸದ್ಯ, ಬೌದ್ಧ ಮತ್ತು ಸಿಖ್ ಧರ್ಮಗಳಿಗೆ ಮತಾಂತರವಾದ ದಲಿತರಿಗೆ ಎಸ್‌ಸಿ ಮೀಸಲಾತಿ ಲಭ್ಯವಿದೆ. ಆದರೆ, ಕ್ರಿಶ್ಚಿಯನ್ ಮತ್ತು ಇಸ್ಲಾಂಗೆ ಮತಾಂತರಗೊಂಡವರಿಗೆ ಮೀಸಲಾತಿ ಇಲ್ಲ.ಈ ಬಗ್ಗೆ ಪ್ರಶ್ನೆ ಎತ್ತಿರುವ ಸ್ಟಾಲಿನ್, ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ 1950ರ ಸಂವಿಧಾನದ ಆದೇಶದ ಅನ್ವಯ, ಹಿಂದೂಗಳನ್ನು ಮಾತ್ರ ಎಸ್‌ಸಿ ಎಂದು ಪರಿಗಣಿಸಲಾಗಿದೆ. 1956ರ ತಿದ್ದುಪಡಿಯಲ್ಲಿ ಸಿಖ್ಖರು ಮತ್ತು 1990ರ ತಿದ್ದುಪಡಿಯಲ್ಲಿ ಬೌದ್ಧ ಧರ್ಮಕ್ಕೆ ಮಂತಾಂತರಗೊಂಡ ದಲಿತರಿಗೆ ಎಸ್‌ಸಿ ಮೀಸಲಾತಿ ಒದಗಿಸಲಾಗಿದೆ. ಅದೇ ರೀತಿ ಕ್ರೈಸತ ಧರ್ಮಕ್ಕೆ ಮಂತಾತರಗೊಂಡ ಆದಿ ದ್ರಾವಿಡ ಸಮುದಾಯಕ್ಕೂ ಎಸ್‌ಸಿ ಮೀಸಲಾತಿ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.