ADVERTISEMENT

ಕೆಲಸದ ಸ್ಥಳಗಳ ಪರಿಸ್ಥಿತಿ ಸುಧಾರಣೆಗೆ ಹೋರಾಟ:ಅನ್ನಾ ಕುಟುಂಬಕ್ಕೆ ರಾಹುಲ್ ಸಾಂತ್ವನ

ಶಮಿನ್‌ ಜಾಯ್‌
Published 21 ಸೆಪ್ಟೆಂಬರ್ 2024, 10:48 IST
Last Updated 21 ಸೆಪ್ಟೆಂಬರ್ 2024, 10:48 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ನವದೆಹಲಿ: ಕೆಲಸದ ಒತ್ತಡದಿಂದ ಮೃತಪಟ್ಟಿದ್ದಾರೆ ಎನ್ನಲಾದ ಅರ್ನ್‌ಸ್ಟ್‌ ಆ್ಯಂಡ್‌ ಯಂಗ್‌ ಸಂಸ್ಥೆಯ ಮಹಿಳಾ ಉದ್ಯೋಗಿ ಅನ್ನಾ ಸೆಬಾಸ್ಟಿಯನ್‌ ಪೆರಾಯಿಲ್‌ ಅವರ ಕುಟುಂಬಕ್ಕೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸಾಂತ್ವನ ಹೇಳಿದ್ದು, ಕೆಲಸದ ಸ್ಥಳಗಳ ಪರಿಸ್ಥಿತಿ ಸುಧಾರಣೆಗೆ ಹೋರಾಡುವುದಾಗಿ ಭರವಸೆ ನೀಡಿದ್ದಾರೆ.

ADVERTISEMENT

ಕೊಚ್ಚಿಯಲ್ಲಿರುವ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದ ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್‌ (ಎಐಪಿಸಿ) ಘಟಕದ ಅಧ್ಯಕ್ಷ ಪ್ರವೀಣ್‌ ಚಕ್ರವರ್ತಿ ಅವರು ಅನ್ನಾ ಅವರ ಕುಟುಂಬದೊಂದಿಗೆ ಮಾತನಾಡಲು ರಾಹುಲ್‌ ಗಾಂಧಿ ಅವರಿಗೆ ವಿಡಿಯೊ ಕರೆ ವ್ಯವಸ್ಥೆ ಮಾಡಿದ್ದರು. ಈ ವೇಳೆ ವಿಡಿಯೊ ಕರೆಯ ಮೂಲಕ ಕುಟುಂಬದವರೊಂದಿಗೆ ಮಾತನಾಡಿದ ರಾಹುಲ್‌ ಅವರು, ತಮ್ಮ ದುಃಖದ ಸಂದರ್ಭದಲ್ಲೂ ಭಾರತದ ಉದ್ಯೋಗಿಗಳ ಹಿತದೃಷ್ಟಿಯಿಂದ ಕೆಲಸದ ಸ್ಥಳಗಳ ಪರಿಸ್ಥಿತಿ ಸುಧಾರಣೆ ಕುರಿತು ಗಮನ ಸೆಳೆದ ಅನ್ನಾ ಕುಟುಂಬದ ನಡೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದ ಎಲ್ಲಾ ಉದ್ಯೋಗಿಗಳ ಹಿತದೃಷ್ಟಿಯಿಂದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅನ್ನಾ ಅವರ ಸ್ಮರಣಾರ್ಥ ಚಳವಳಿ ಹಮ್ಮಿಕೊಳ್ಳುವಂತೆಯೂ ಎಐಪಿಸಿ ಅಧ್ಯಕ್ಷರಿಗೆ ರಾಹುಲ್‌ ಸೂಚನೆ ನೀಡಿದರು ಎಂದು ಎಐಪಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

‘ರಾಹುಲ್‌ ಅವರ ಸೂಚನೆಯಂತೆ ಕೆಲಸದ ಒತ್ತಡ ಮತ್ತು ಕೆಲಸದ ಅನಾರೋಗ್ಯಕರ ಸಂಸ್ಕೃತಿಗೆ ಸಂಬಂಧಿಸಿದಂತೆ ಕಾರ್ಪೊರೇಟ್‌ ಉದ್ಯೋಗಿಗಳಿಂದ ಮಾಹಿತಿ ಕಲೆಹಾಕಲು ಎಐಪಿಸಿ ಸಹಾಯವಾಣಿಯೊಂದನ್ನು ಆರಂಭಿಸಲಿದೆ. ಬಳಿಕ ಕಾರ್ಪೊರೇಟ್‌ ಕ್ಷೇತ್ರದಲ್ಲಿ ಉದ್ಯೋಗಿಗಳ ಕೆಲಸದ ಪರಿಸ್ಥಿತಿ ಸುಧಾರಣೆಗೆ ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಲು ಎಐಪಿಸಿ ಶ್ರಮಿಸಲಿದೆ’ ಎಂದು ಪ್ರಕಟಣೆ ತಿಳಿಸಿದೆ.

ಕಳೆದ ರಾತ್ರಿ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು, ಅನ್ನಾ ಅವರ ತಂದೆ ಸಿ.ಬಿ ಜೋಸೆಫ್‌ ಅವರೊಂದಿಗೆ ನಡೆಸಿದ ಸಂಭಾಷಣೆ ತೀವ್ರ ಭಾವನಾತ್ಮಕವಾಗಿತ್ತು ಎಂದು ಹೇಳಿದ್ದಾರೆ.

‘ಖಾಸಗಿ ವಲಯದಲ್ಲಾಗಲಿ ಅಥವಾ ಸಾರ್ವಜನಿಕ ವಲಯದಲ್ಲಾಗಲಿ ದಿನಕ್ಕೆ ಎಂಟು ಗಂಟೆಗಳು, ವಾರದಲ್ಲಿ ಐದು ದಿನ ಮೀರದಂತಹ ಕೆಲಸದ ಕ್ಯಾಲೆಂಡರ್ ಅನ್ನು ಶಾಸನಬದ್ಧಗೊಳಿಸುವ ಬಗ್ಗೆ ಸಂಸತ್ತಿನಲ್ಲಿ ನಾನು ಪ್ರಸ್ತಾಪಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಅರ್ನ್‌ಸ್ಟ್‌ ಆ್ಯಂಡ್‌ ಯಂಗ್‌ ಸಂಸ್ಥೆಯು ‘2024ರ ಜುಲೈನಲ್ಲಿ ಮೃತಪಟ್ಟ ಅನ್ನಾ ಅವರ ಸಾವಿನಿಂದ ತೀವ್ರ ದುಖಃವಾಗಿದೆ’ ಎಂದು ಪ್ರಕಟಣೆಯಲ್ಲಿ ಬುಧವಾರ ತಿಳಿಸಿತ್ತು. ಸಾವಿನ ಬಳಿಕ ಕಾರ್ಮಿಕ ಸಚಿವಾಲಯವು ಸಹ ಕೆಲಸದ ಸ್ಥಳಗಳಲ್ಲಿ ಅಸುರಕ್ಷಿತ ಮತ್ತು ಶೋಷಿತ ವಾತಾವರಣ ಕುರಿತು ತನಿಖೆ ಕೈಗೆತ್ತಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.