ನವದೆಹಲಿ: ಬಲಾಕೋಟ್‍ನಲ್ಲಿರುವ ಜೈಷ್ - ಎ- ಮೊಹಮ್ಮದ್ ಉಗ್ರ ಸಂಘಟನೆಯ ಬೃಹತ್ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯಪಡೆ ವೈಮಾನಿಕ ದಾಳಿ ನಡೆಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಈ ವೈಮಾನಿಕ ದಾಳಿ 'ನಾನ್–ಮಿಲಿಟರಿ ಆ್ಯಕ್ಷನ್’ (ಸೇನೆಯ ಮೇಲೆ ನಡೆಸಿದ ದಾಳಿ ಅಲ್ಲ) ಎಂದು ಹೇಳಿದ ಗೋಖಲೆ, ದಾಳಿಯಲ್ಲಿ ಹಲವಾರು ಉಗ್ರರು ಹತರಾಗಿದ್ದಾರೆ ಎಂದಿದ್ದಾರೆ.
ಆದಾಗ್ಯೂ, ಈ ದಾಳಿಯಲ್ಲಿ ಹತರಾದ ಉಗ್ರರ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಲಭಿಸಿಲ್ಲ.ಆದರೆ ಭಾರತದ ಸುದ್ದಿ ಮಾಧ್ಯಮಗಳ ಪ್ರಕಾರ ಈ ದಾಳಿಯಲ್ಲಿ 300 ಉಗ್ರರು ಹತ್ಯೆಯಾಗಿದ್ದಾರೆ.
ರಾಯಿಟರ್ಸ್ ಸುದ್ದಿ ಪ್ರಕಾರ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಒಬ್ಬ ನಾಗರಿಕನಿಗೆ ಗಾಯವಾಗಿದೆ. ವೈಮಾನಿಕ ದಾಳಿ ನಡೆದ ಪ್ರದೇಶದಲ್ಲಿರುವ ಪಾಕ್ ಗ್ರಾಮಸ್ಥರ ಪ್ರಕಾರ ಭಾರತದ ವಿಮಾನಗಳು ದಾಳಿ ನಡೆಸಿದ್ದು, ಮಂಗಳವಾರ ಮುಂಜಾನೆ 4 ಬಾರಿ ದೊಡ್ಡ ಸದ್ದು ಕೇಳಿಸಿದೆ.ಬಲಾಕೋಟ್‍ನಲ್ಲಿ ನಡೆದ ಈ ದಾಳಿಯಲ್ಲಿ ನಾಗರಿಕನೊಬ್ಬನಿಗೆ ಗಾಯವಾಗಿದೆ.
ಮರಗಳು ಉರುಳಿ ಬಿದ್ದಿದ್ದು, ಒಂದು ಮನೆಗೆ ಹಾನಿಯಾಗಿದೆ. ಬಾಂಬ್ ಬಿದ್ದ ಸ್ಥಳದಲ್ಲಿ ನಾಲ್ಕು ಹೊಂಡಗಳಾಗಿವೆ ಎಂದು ದಾಳಿ ನಡೆದ ಸ್ಢಳಕ್ಕೆ ಭೇಟಿ ನೀಡಿದ್ದ 25ರ ಹರೆಯದ ಮೊಹಮ್ಮದ್ ಅಜ್ಮಲ್ ಎಂಬಾತ ಹೇಳಿದ್ದಾನೆ.ಅದೇ ವೇಳೆ ಬಿಬಿಸಿ ಜತೆ ಮಾತನಾಡಿದ ಪ್ರತ್ಯಕ್ಷದರ್ಶಿಯೊಬ್ಬರು ದಾಳಿಯಲ್ಲಿ ವ್ಯಕ್ತಿಯೊಬ್ಬನಿಗೆ ಗಾಯವಾಗಿದ್ದು, ನಾಲ್ಕೈದು ಮನೆಗಳಿಗೆ ಹಾನಿಯಾಗಿದೆ ಎಂದು ನ್ಯೂಸ್ ಲಾಂಡ್ರಿ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.