ADVERTISEMENT

ಬಜೆಟ್‌ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಕುತೂಹಲಕಾರಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 6:45 IST
Last Updated 3 ಜುಲೈ 2019, 6:45 IST
   

ದೇಶದ ಅಭಿವೃದ್ಧಿಗಾಗಿ ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ದುಡ್ಡನ್ನು ಹೇಗೆ ನೀಡಲಾಗುತ್ತದೆ, ಯಾವ ಮೂಲದಿಂದ ಹಣ ಹೊಂಚಲಾಗುತ್ತದೆ ಎಂಬುದೇ ಬಜೆಟ್‌. ಭಾರತ ಸರ್ಕಾರದ ಬಜೆಟ್‌ಗಳ ಹಿಂದೆ ಕೆಲ ಕೌತುಕಗಳಿಗೆ. ಅವುಗಳನ್ನು ನೆನಪಿಸುವ ಬರಹವಿದು.

ಬಜಟ್‌ ಮಂಡಿಸಿದ ಮಹಿಳೆಯರಿವರು...

ಕೇಂದ್ರದಲ್ಲಿ ಬಜೆಟ್‌ ಮಂಡಿಸಿದ ಮೊದಲ ಮಹಿಳೆ ಅದು ಮಾಜಿ ಪ್ರಧಾನಿ ಇಂದಿರಾಗಾಂಧಿ. ಆದರೆ, ಅವರು ಪ್ರಧಾನಿಯಾಗಿದ್ದುಕೊಂಡು, ಹಣಕಾಸು ಖಾತೆಯನ್ನೂ ನಿರ್ವಹಿಸುತ್ತಿದ್ದರು. ಅವರ ನಂತರ ಹಣಕಾಸು ಸಚಿವರಾಗಿ ಆಯ್ಕೆಯಾದ ಮೊದಲ ಮಹಿಳೆ ನಿರ್ಮಲಾ ಸೀತಾರಾಮನ್‌. ಜುಲೈ 5ರಂದು ನಿರ್ಮಲಾ ಅವರು ಬಜೆಟ್‌ ಮಂಡಿಸಿದರೆ, ಇಂದಿರಾ ನಂತರ ಆಯವ್ಯಯ ಮಂಡಿಸಿದ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ.

ADVERTISEMENT

ದೇಶದ ಮೊದಲ ಬಜೆಟ್‌ ಮಂಡಿಸಿದ್ದು ಯಾರು?

1947ರಲ್ಲಿ ಭಾರತ ಸ್ವತಂತ್ರಗೊಂಡ ನಂತರ ರಚನೆಯಾದ ಮೊದಲ ಭಾರತ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದವರು ತಮಿಳುನಾಡಿನ ಆರ್‌.ಕೆ ಷಣ್ಮುಗಮ್‌ ಶೆಟ್ಟಿ.1947–49ರ ಅವಧಿಗೆ ವಿತ್ತ ಮಂತ್ರಿಯಾಗಿದ್ದ ಅವರೇ ದೇಶದ ಮೊದಲ ಬಜೆಟ್‌ ಅನ್ನೂ ಮಂಡಿಸಿದ್ದರು.

ಹೆಚ್ಚು ಬಜೆಟ್‌ ಮಂಡಿಸಿದವರು ಯಾರು?

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು 10 ಬಜೆಟ್‌ಗಳನ್ನು ಮಂಡಿಸಿ ದಾಖಲೆ ಬರೆದಿದ್ದಾರೆ. ಅವರ ನಂತರ ಪಿ.ಚಿದಂಬರಂ 9 ಬಾರಿ, ಪ್ರಣಾಬ್‌ ಮುಖರ್ಜಿ 8 ಬಾರಿ ಬಜೆಟ್‌ ಮಂಡಿಸಿದ್ದಾರೆ. ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ. ಮೊರಾರ್ಜಿ ದೇಸಾಯಿ ಅವರು 2 ಬಾರಿ ತಮ್ಮ ಹುಟ್ಟುಹಬ್ಬದ ದಿನವೇ (ಫೆ.29–1964, 1968) ಬಜೆಟ್‌ ಮಂಡಿಸಿದ್ದರು. ದೇಸಾಯಿ 1896 ಫೆ.29 ರಂದು ಜನಿಸಿದವರು.

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ

ಬಜೆಟ್‌ ಆರಂಭವಾಗುತ್ತಿದ್ದದ್ದು ಸಂಜೆ 5ರ ನಂತರ

1999ರ ವರೆಗೆ ಫೆಬ್ರುವರಿ ಕೊನೆ ದಿನ ಸಂಜೆ 5 ಗಂಟೆಗೆ ಬಜೆಟ್‌ ಮಂಡನೆಯನ್ನು ಆರಂಭಿಸಲಾಗುತ್ತಿತ್ತು. ಇದು ಬ್ರಿಟಿಷ್‌ ಸಂಪ್ರದಾಯ. ಆದರೆ, 1999ರಲ್ಲಿ ಎನ್‌ಡಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ್‌ ಸಿನ್ಹಾ ಅವರು ಈ ಸಂಪ್ರದಾಯ ಮುರಿದು ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡನೆ ಆರಂಭಿಸಿದ್ದರು.

ಬಜೆಟ್‌ ಮಂಡಿಸಿದ ಪ್ರಧಾನಿಗಳಿವರು...

ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಬಜೆಟ್‌ ಮಂಡಿಸಿರುವ ಪ್ರಧಾನಿಗಳು. ಈ ಮೂವರೂ ಪ್ರಧಾನ ಮಂತ್ರಿಯಾಗಿಯೂ ಹಣಕಾಸು ಇಲಾಖೆಯನ್ನು ನಿರ್ವಹಿಸುತ್ತಿದ್ದರು. ಈ ಮೂವರು ಒಂದೇ ಕುಟುಂಬದವರು.

ಬಜೆಟ್‌ಗೂ ಮೊದಲುಹಣಕಾಸು ಇಲಾಖೆಯಿಂದ ಹಲ್ವಾ ಮಾಡುವುದು ಏಕೆ?

ಬಜೆಟ್‌ಗೆ ಇನ್ನು 10–15ದಿನವಿದೆ ಎನ್ನುವಾಗ ಹಣಕಾಸು ಇಲಾಖೆ ಸಿಬ್ಬಂದಿ ಬಜೆಟ್‌ ಪುಸ್ತಕ ಮುದ್ರಣಾ ಕಾರ್ಯಕ್ಕೆ ತೆರಳುತ್ತಾರೆ. ಸಂಸತ್‌ ಭವನದ ಉತ್ತರ ಬ್ಲಾಕ್‌ನಲ್ಲಿ ಇದು ಅತ್ಯಂತ ಗೌಪ್ಯವಾಗಿ ನಡೆಯುತ್ತದೆ. ಮುದ್ರಣ ಮುಗಿದು ಬಜೆಟ್‌ ಮಂಡನೆ ಆಗುವ ವರೆಗೆ ಸಿಬ್ಬಂದಿ ಮನೆಗೆ ಹೋಗುವಂತಿಲ್ಲ. ಹೀಗಾಗಿ ಮುದ್ರಣ ಕಾರ್ಯ ಆರಂಭಕ್ಕೂ ಮೊದಲು ಕೇಂದ್ರ ಹಣಕಾಸು ಸಚಿವರು ತಮ್ಮ ಸಿಬ್ಬಂದಿಗೆ ಹಲ್ವಾ ಸಮಾರಂಭ ಆಯೋಜಿಸುತ್ತಾರೆ. ಯಾವುದೇ ಶುಭ ಕಾರ್ಯ ಆರಂಭಿಸುವುದಕ್ಕೂ ಮೊದಲು ಭಾರತದಲ್ಲಿ ಸಿಹಿ ಹಂಚಿಕೊಳ್ಳುವ ಸಂಪ್ರದಾಯವಿದೆ. ಅದೇ ಪರಿಪಾಟವನ್ನೇ ಇಲ್ಲಿಯೂ ಅನುಸರಿಸಲಾಗುತ್ತದೆ.

ಪ್ರತ್ಯೇಕವಾಗಿತ್ತು ರೈಲ್ವೇ ಬಜೆಟ್‌!

2017ರ ವರೆಗೆ 92 ವರ್ಷಗಳ ಕಾಲ ದೇಶದಲ್ಲಿ ರೈಲ್ವೇ ಬಜೆಟ್‌ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. 2017ರಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ಅರುಣ್‌ ಜೇಟ್ಲಿ ಈ ಸಂಪ್ರದಾಯಕ್ಕೆ ಕೊನೆ ಹಾಡಿದರು. ಅಂದಿನಿಂದ ಸಾಮಾನ್ಯ ಬಜೆಟ್‌ನಲ್ಲೇ ರೈಲ್ವೇ ಅನುದಾನವನ್ನೂ ಘೋಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.