ಸತಾರಾ: ‘ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹಾಗೂ ಅವರ ಬಿಜೆಪಿ ಸಹೋದ್ಯೋಗಿಗಳು ‘ಮತ ಜಿಹಾದ್’ ಅನ್ನು ಮುಂದೆ ಮಾಡಿಕೊಂಡು ಚುನಾವಣೆಗೆ ಧಾರ್ಮಿಕ ಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ’ ಎಂದು ಎನ್‌ಸಿಪಿ (ಶರದ್ ಬಣ) ಮುಖ್ಯಸ್ಥ ಶರದ್ ಪವಾರ್ ಶನಿವಾರ ಆರೋಪಿಸಿದರು.
‘ಪುಣೆಯ ಒಂದು ಪ್ರದೇಶದಲ್ಲಿ ಹಿಂದೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ಅವರು ಬಿಜೆಪಿಗೆ ಮತ ನೀಡುತ್ತಾರೆ. ಹಿಂದೂಗಳು ಬಿಜೆಪಿಗೇ ಮತ ನೀಡುತ್ತಾರೆ ಎನ್ನುವುದು ಸಾಮಾನ್ಯ ಜ್ಞಾನ. ಹಾಗೆಂದ ಮಾತ್ರಕ್ಕೆ ಇದನ್ನು ‘ಮತ ಜಿಹಾದ್’ ಎನ್ನಲಾಗದು. ಚುನಾವಣೆಗೆ ಧಾರ್ಮಿಕ ಬಣ್ಣ ನೀಡುವುದನ್ನು ನಾವು ವಿರೋಧಿಸುತ್ತೇವೆ’ ಎಂದರು.
ಮನವಿ ಪತ್ರ: ಮತದಾನಕ್ಕೆ ಕೆಲವೇ ದಿನಗಳು ಉಳಿದಿರುವಂತೆ ಶರದ್ ಪವಾರ್ ಅವರು ಕೆಲವು ಮನವಿಗಳನ್ನು ಸಾರ್ವಜನಿಕರ ಮುಂದಿಟ್ಟಿದ್ದಾರೆ. ಈ ಮನವಿ ಪತ್ರವು ಮರಾಠಿ ಪತ್ರಿಕೆಗಳಲ್ಲಿ ಶನಿವಾರ ಪ್ರಕಟಗೊಂಡಿವೆ. ‘ರಾಜ್ಯದ ಸುಸಂಸ್ಕೃತ ರಾಜಕಾರಣವನ್ನು ಹಾಳು ಮಾಡಿ, ಪಕ್ಷಗಳನ್ನು, ಕುಟುಂಬಗಳನ್ನು ಇಬ್ಭಾಗ ಮಾಡಿದವರನ್ನು ಮತದಾರರು ತಿರಸ್ಕರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
‘ಲಡ್ಕಿ ಬೆಹನಾ’ ಯೋಜನೆ ಮೂಲಕ ಮಹಿಳೆಯರಿಗೆ ಹಣ ನೀಡುತ್ತಾರೆ. ಇನ್ನೊಂದು ಕಡೆ, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಏರಿಕೆಯಾಗಿವೆ. ಮಹಿಳೆಯರ ಬಗ್ಗೆ ಕಾಳಜಿ ಇದೆ ಎನ್ನುತ್ತಾರೆ. ಆದರೆ, ಅವರನ್ನು ರಕ್ಷಿಸಲು ಸೋಲುತ್ತಾರೆ’ ಎಂದು ದೂರಿದ್ದಾರೆ.
ಮಹಾರಾಷ್ಟ್ರದವು ಸುಸಂಸ್ಕೃತ ಪ್ರಗತಿಶೀಲ ಶಕ್ತಿಯುತ ಹಾಗೂ ಆತ್ಮಗೌರವದ ರಾಜ್ಯವಾಗಿದೆ. ಆದರೆ ಈಗ ರಾಜ್ಯವನ್ನು ಆಳುತ್ತಿರುವವರು ದೆಹಲಿಯಲ್ಲಿ ಇರುವವರ ಕೈಗೊಂಬೆಯಾಗಿದ್ದಾರೆ.-ಶರದ್ ಪವಾರ್, ಎನ್‌ಸಿಪಿ (ಶರದ್ ಬಣ) ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.