ADVERTISEMENT

Maharashtra Elections | 11 ಸ್ಥಾನಗಳಿಗೆ ಮುಂದುವರಿದ ಜಗ್ಗಾಟ

ಮಹಾಯುತಿ ಮೈತ್ರಿಕೂಟ ಸೀಟು ಹಂಚಿಕೆ * ಫಡಣವೀಸ್ ನಾಮಪತ್ರ ಸಲ್ಲಿಕೆ

ಪಿಟಿಐ
Published 25 ಅಕ್ಟೋಬರ್ 2024, 23:24 IST
Last Updated 25 ಅಕ್ಟೋಬರ್ 2024, 23:24 IST
<div class="paragraphs"><p>ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ತಮ್ಮ ತಾಯಿಯ ಆಶೀರ್ವಾದ ಪಡೆದರು </p></div>

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ತಮ್ಮ ತಾಯಿಯ ಆಶೀರ್ವಾದ ಪಡೆದರು

   

–ಪಿಟಿಐ ಚಿತ್ರ

ಮುಂಬೈ/ ನಾಗಪುರ: ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಇನ್ನುಳಿದ 11 ಸೀಟುಗಳ ಹಂಚಿಕೆಗೆ ಸಂಬಂಧಿಸಿದಂತೆ ಮಾತುಕತೆ ಮುಂದುವರಿಸಿವೆ ಎಂದು ಎನ್‌ಸಿಪಿ ಮುಖ್ಯಸ್ಥ, ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಹೇಳಿದ್ದಾರೆ.

ADVERTISEMENT

ತಮ್ಮ ಪಕ್ಷಕ್ಕೆ ಹಂಚಿಕೆಯಾಗಿರುವ ಸೀಟುಗಳಲ್ಲಿ ಶೇ 10ರಷ್ಟನ್ನು ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಮೀಸಲಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.

‘ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಈಗಾಗಲೇ ಪ್ರಕಟಿಸಿದ್ದೇನೆ. 11 ಸೀಟುಗಳಿಗೆ ಸಂಬಂಧಿಸಿದಂತೆ ಮೈತ್ರಿಕೂಟದ ನಾಯಕರು  ಮಾತುಕತೆ ಮುಂದುವರಿಸಿದ್ದಾರೆ. ಎಲ್ಲರನ್ನೂ ತೃಪ್ತಿಪಡಿಸಲು ನಮಗೆ ಸಾಧ್ಯವಿಲ್ಲ’ ಎಂದು ಬಾರಾಮತಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಅವರು ಹೇಳಿದ್ದಾರೆ.

ಮಹಾಯುತಿ ಮೈತ್ರಿಕೂಟವು ಎನ್‌ಸಿಪಿ (ಅಜಿತ್‌ ಪವಾರ್‌ ಬಣ), ಬಿಜೆಪಿ ಮತ್ತು ಶಿವಸೇನಾ (ಶಿಂದೆ ಬಣ) ಪಕ್ಷಗಳನ್ನು ಒಳಗೊಂಡಿವೆ. ಪವಾರ್‌ ಅವರು ಸೀಟು ಹಂಚಿಕೆ ಸಂಬಂಧ ಗುರುವಾರ ನವದೆಹಲಿಯಲ್ಲಿ ಬಿಜೆಪಿ ನಾಯಕರ ಜತೆ ಮಾತುಕತೆ ನಡೆಸಿದ್ದಾರೆ.

ಬಿಜೆಪಿಯು ತನ್ನ ಮೊದಲ ಪಟ್ಟಿಯಲ್ಲಿ 99 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಎನ್‌ಸಿಪಿ ತನ್ನ ಎರಡು ಪಟ್ಟಿಗಳಲ್ಲಿ 45 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಶಿವಸೇನಾ ಕೂಡಾ 45 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

ಫಡಣವೀಸ್‌ ನಾಮಪತ್ರ ಸಲ್ಲಿಕೆ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ನ.20ರಂದು ನಡೆಯುವ ಚುನಾವಣೆಯಲ್ಲಿ ಅವರು ನಾಗಪುರ ನೈರುತ್ಯ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. 

2014 ರಿಂದ 2019ರವರೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಫಡಣವೀಸ್‌ ಅವರು ನಾಗಪುರ ಪಶ್ಚಿಮ ಕ್ಷೇತ್ರದಿಂದ ಎರಡು ಸಲ ಹಾಗೂ ನಾಗಪುರ ನೈರುತ್ಯ ಕ್ಷೇತ್ರದಿಂದ ಮೂರು ಸಲ ಗೆದ್ದಿದ್ದಾರೆ. 1999ರಿಂದಲೂ ಅವರು ಗೆಲ್ಲುತ್ತಾ ಬಂದಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ರಾಜ್ಯದ ಬಿಜೆಪಿ ಸರ್ಕಾರ ಕಳೆದ ಏಳೂವರೆ ವರ್ಷಗಳಲ್ಲಿ ಮತ್ತು ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳು ನಾಗಪುರದ ಚಹರೆಯನ್ನೇ ಬದಲಿಸಿದೆ’ ಎಂದರು.

ಜಾತಿ ಸಮೀಕ್ಷೆ ನಡೆಸಲು ಮಹಾಯುತಿ ಸರ್ಕಾರ ಮುಂದಾಗದೇ ಇರುವುದರಿಂದ ಮಹಾರಾಷ್ಟ್ರದ ಹಲವಾರು ಹಿಂದುಳಿದ ಸಮುದಾಯಗಳಿಗೆ ಅನ್ಯಾಯ ಆಗಿದೆ
ಜೈರಾಮ್‌ ರಮೇಶ್ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ)

ಬಾಂದ್ರಾ ಪೂರ್ವ: ಜೀಶನ್‌ ಸಿದ್ದೀಕಿ ಕಣಕ್ಕೆ

ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದ್ದು ಏಳು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಈಚೆಗೆ ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಅವರ ಪುತ್ರ ಹಾಲಿ ಶಾಸಕ ಜೀಶನ್‌ ಸಿದ್ದೀಕಿ ಅವರನ್ನು ಬಾಂದ್ರಾ ಪೂರ್ವ ಕ್ಷೇತ್ರದಿಂದ ಕಣಕ್ಕಿಳಿಸಿದೆ. 2019ರಲ್ಲಿ ಇದೇ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಗೆದ್ದಿದ್ದ ಜೀಶನ್ ಬಳಿಕ ಎನ್‌ಸಿಪಿ ಸೇರಿದ್ದರು. ಎನ್‌ಸಿಪಿ ತನ್ನ ಮೊದಲ ಪಟ್ಟಿಯಲ್ಲಿ 38 ಕ್ಷೇತ್ರಗಳಿಗೆ ಆಭ್ಯರ್ಥಿಗಳನ್ನು ಪ್ರಕಟಿಸಿತ್ತು. ಈಚೆಗೆ ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕೆ ಜೀಶನ್‌ ಅವರನ್ನು ಕಾಂಗ್ರೆಸ್‌ ಅಮಾನತು ಮಾಡಿತ್ತು.  ‘ನನ್ನ ಕುಟುಂಬಕ್ಕೆ ಇದು (ಟಿಕೆಟ್‌ ಘೋಷಣೆ) ಭಾವನಾತ್ಮಕ ಕ್ಷಣವಾಗಿದೆ. ನನ್ನ ಜತೆಗಿದ್ದ ಕೆಲವು ಸ್ನೇಹಿತರೇ ಮೋಸ ಮಾಡಿದಾಗ ಅಜಿತ್‌ ದಾದಾ ಅವರು ತಮ್ಮ ಮಾತನ್ನು ಉಳಿಸಿಕೊಂಡರು. ನನ್ನ ಮೇಲೆ ನಂಬಿಕೆಯನ್ನಿಟ್ಟು ಬಾಂದ್ರಾ ಪೂರ್ವ ಕ್ಷೇತ್ರದ ಟಿಕೆಟ್‌ ನೀಡಿದ್ದಾರೆ. ಚುನಾವಣೆಯಲ್ಲಿ ಗೆದ್ದು ತಂದೆಯ ಕನಸು ಈಡೇರಿಸುವೆ’ ಎಂದು ಜೀಶನ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.