ADVERTISEMENT

ಮಹಾರಾಷ್ಟ್ರ ಚುನಾವಣೆ: ನಾಗ್ಪುರದಿಂದ ನಾಮಪತ್ರ ಸಲ್ಲಿಸಿದ ದೇವೇಂದ್ರ ಫಡಣವೀಸ್

ಪಿಟಿಐ
Published 25 ಅಕ್ಟೋಬರ್ 2024, 10:13 IST
Last Updated 25 ಅಕ್ಟೋಬರ್ 2024, 10:13 IST
<div class="paragraphs"><p>ಮಹಾರಾಷ್ಟ್ರದ ನಾಗ್ಪುರದಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪಕ್ಷದ ಇತರ ಮುಖಂಡರ ಸಮ್ಮುಖದಲ್ಲಿ&nbsp; ಒಗ್ಗಟ್ಟು ಪ್ರದರ್ಶಿಸಿದರು</p></div>

ಮಹಾರಾಷ್ಟ್ರದ ನಾಗ್ಪುರದಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪಕ್ಷದ ಇತರ ಮುಖಂಡರ ಸಮ್ಮುಖದಲ್ಲಿ  ಒಗ್ಗಟ್ಟು ಪ್ರದರ್ಶಿಸಿದರು

   

ಪಿಟಿಐ ಚಿತ್ರ

ನಾಗ್ಪುರ: ಮಹಾರಾಷ್ಟ್ರ ಉಪಮುಖ್ಯಮಂತ್ರಿಯೂ ಆಗಿರುವ ಬಿಜೆಪಿಯ ಹಿರಿಯ ಮುಖಂಡ ದೇವೇಂದ್ರ ಫಡಣವೀಸ್ ಅವರು ನಾಗ್ಪುರ ಆಗ್ನೇಯ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ADVERTISEMENT

ರಾಜ್ಯದಲ್ಲಿ ನ. 20ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಅವಧಿ ಆರಂಭಗೊಂಡಿದೆ. ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಫಡಣವೀಸ್, ‘ಮಹಾಯುತಿ ಸರ್ಕಾರವು ತಾನು ಹೇಳಿದ್ದನ್ನು ಮಾಡಿತೋರಿಸುತ್ತದೆ ಎಂದಿದ್ದಾರೆ.

2014ರಿಂದ 2019ರವರೆಗೂ ಫಡಣವೀಸ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. 2019ರ ನವೆಂಬರ್‌ನಲ್ಲಿ 80 ಗಂಟೆಗಳ ಅವಧಿಗಷ್ಟೇ ಮುಖ್ಯಮಂತ್ರಿಯಾಗಿದ್ದರು. ಐದು ಬಾರಿ ಶಾಸಕರಾಗಿರುವ ಅವರು, ನಾಗ್ಪುರ ಪೂರ್ವದಿಂದ ಎರಡು ಬಾರಿ, ನಾಗ್ಪುರ ಆಗ್ನೇಯದಿಂದ ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದಾರೆ. ಇದು ಫಡಣವೀಸ್ ಅವರ 6ನೇ ಚುನಾವಣೆಯಾಗಿದೆ. 

ನಾಮಪತ್ರ ಸಲ್ಲಿಕೆಗೂ ಮೊದಲು ಪಕ್ಷದ ಹಿರಿಯ ಮುಖಂಡ ನಿತಿನ್ ಗಡ್ಕರಿ ಅವರನ್ನು ಅವರ ಮನೆಯಲ್ಲಿ ಭೇಟಿಯಾದರು. ನಂತರ ಸಂವಿಧಾನ ಚೌಕದಲ್ಲಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ರೋಡ್‌ ಶೋ ಮೂಲಕ ಸಾಗಿಬಂದು ನಾಮಪತ್ರ ಸಲ್ಲಿಸಿದರು. 

ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಮಾತಿಗಿಂತ ನಮ್ಮ ಕೆಲಸಗಳೇ ಕ್ಷೇತ್ರದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ನಾಗ್ಪುರದ ಜನರು ಇಲ್ಲಿನ ಅಭಿವೃದ್ಧಿಯನ್ನು ಗಮನಿಸಿದ್ದಾರೆ. ಮೆಟ್ರೊ ರೈಲು, ನಾಗ್ಪುರ– ಮುಂಬೈ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಒಳಗೊಂಡಂತೆ ಹಲವು ಅಭಿವೃದ್ಧಿ ಕಾರ್ಯಗಳು ನಾಗ್ಪುರದ ಸ್ವರೂಪವನ್ನೇ ಬದಲಿಸಿವೆ. ರಾಜ್ಯದಲ್ಲಿ ಏಳೂವರೆ ವರ್ಷ ಹಾಗೂ ಕೇಂದ್ರದಲ್ಲಿ ಹತ್ತು ವರ್ಷದಿಂದ ಬಿಜೆಪಿ ಸರ್ಕಾರ ಇರುವುದರಿಂದ ಅಭಿವೃದ್ಧಿ ಕಾರ್ಯಗಳು ಇವೆಲ್ಲದಕ್ಕೂ ನೆರವಾಗಿದೆ’ ಎಂದಿದ್ದಾರೆ.

‘ವಿರೋಧಿಗಳ ಸೋಲಿಗೆ ನಮ್ಮ ‘ಲಡ್ಕಿ ಬಹಿನ್’ ಎಂಬ ಯೋಜನೆಯೊಂದೇ ಸಾಕು. ಅರ್ಹ ಮಹಿಳೆಯರಿಗೆ ಮಾಸಿಕ ₹1,500 ಆರ್ಥಿಕ ನೆರವು ನೀಡುವ ಈ ಜನಪ್ರಿಯ ಯೋಜನೆ ನಿಲ್ಲಿಸಲು ಕಾಂಗ್ರೆಸ್‌ನ ಮುಖಂಡರು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಎನ್‌ಸಿಪಿ ಹಾಗೂ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವು ಅಭಿವೃದ್ಧಿ ಯೋಜನೆಗಳ ಮೂಲಕ ವಿದರ್ಭ ಪ್ರಾಂತ್ಯದ ಚಿತ್ರಣವನ್ನೇ ಬದಲಿಸಿದೆ. ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಸರ್ಕಾರವು 48 ನಿರ್ಣಯಗಳನ್ನು ತೆಗೆದುಕೊಂಡಿದೆ’ ಎಂದರು.

ನಿತಿನ್ ಗಡ್ಕರಿ ಮಾತನಾಡಿ, ‘ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಮಾಡದ್ದನ್ನು ಮಹಾಯುತಿ ಸರ್ಕಾರ ಕೆಲವೇ ವರ್ಷಗಳಲ್ಲಿ ಮಾಡಿದೆ. ಕಳೆದ 10 ವರ್ಷಗಳಲ್ಲಿ ನಾಗ್ಪುರ ಕ್ಷೇತ್ರಕ್ಕೆ ₹1 ಲಕ್ಷ ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ. ಮಹಾರಾಷ್ಟ್ರವು ಫಡಣವೀಸ್ ಎಂಬ ಅತ್ಯಂತ ಪ್ರಬಲ ನಾಯಕನನ್ನು ಪಡೆದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.