ನವದೆಹಲಿ: ಅರ್ಹತೆ ಇದ್ದರೆ ನೌಕರರನ್ನು ಬಡ್ತಿಗೆ ಪರಿಗಣಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅರ್ಹತೆ ಇರುವವರನ್ನು ಬಡ್ತಿಗೆ ಪರಿಗಣಿಸದೆ ಇರುವುದು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಕ್ಕೆ ಸಮನಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಬಡ್ತಿಗೆ ಪರಿಗಣಿಸುವುದನ್ನು ನ್ಯಾಯಾಲಯಗಳು ಶಾಸನಾತ್ಮಕ ಹಕ್ಕನ್ನಾಗಿ ಮಾತ್ರ ಕಂಡಿಲ್ಲ; ಬದಲಿಗೆ, ಅದನ್ನು ಮೂಲಭೂತ ಹಕ್ಕನ್ನಾಗಿ ಕಂಡಿವೆ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ. ಆದರೆ, ಬಡ್ತಿ ಪಡೆದುಕೊಳ್ಳುವುದು ಮೂಲಭೂತ ಹಕ್ಕಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.
ಬಿಹಾರ ವಿದ್ಯುಚ್ಛಕ್ತಿ ಮಂಡಳಿಯ ಅಧೀನ ಕಾರ್ಯದರ್ಶಿ ಧರ್ಮದೇವ್ ದಾಸ್ ಅವರಿಗೆ 2003ರ ಬದಲಾಗಿ, 1997ರಿಂದ ಅನ್ವಯವಾಗುವಂತೆ ಜಂಟಿ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡುವುದನ್ನು ಪರಿಗಣಿಸಬೇಕು ಎಂದು ಪಟ್ನಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಬಡ್ತಿ ಹುದ್ದೆಗೆ ನೇಮಕ ಆಗುವುದನ್ನು ಯಾವುದೇ ರೀತಿಯಿಂದಲೂ ಪ್ರಶ್ನಾತೀತ ಹಕ್ಕು ಎಂದು ಪರಿಗಣಿಸಲು ಅವಕಾಶ ಇಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ. ‘ಕನಿಷ್ಠ ಸೇವಾ ಅರ್ಹತೆಯನ್ನು ಹೊಂದಿದ ಮಾತ್ರಕ್ಕೆ ಯಾವ ನೌಕರನೂ ಮುಂದಿನ ಹಂತದ ಹುದ್ದೆಗೆ ತನಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಲು ಅವಕಾಶ ಇಲ್ಲ’ ಎಂದು ಕೂಡ ಅದು ಹೇಳಿದೆ.
‘ಅವಕಾಶಗಳಲ್ಲಿ ಸಮಾನತೆ’ ಇರಬೇಕು ಎಂಬ ತತ್ವದ ಆಧಾರದಲ್ಲಿ ಬಡ್ತಿಗೆ ಪರಿಗಣಿಸುವುದನ್ನು ಮೂಲಭೂತ ಹಕ್ಕು ಎಂದು ಕಾಣಲಾಗಿದೆ ಎಂದು ಕೋರ್ಟ್ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.