ADVERTISEMENT

ಹೆಸರು ಬದಲು: ಜನರಿಗೆ ಗೊಂದಲ

ಪಿಟಿಐ
Published 11 ನವೆಂಬರ್ 2018, 20:15 IST
Last Updated 11 ನವೆಂಬರ್ 2018, 20:15 IST
   

ಫೈಜಾಬಾದ್‌: ಅಯೋಧ್ಯಾ ಎಂದು ಹೆಸರು ಬದಲಿಸಿಕೊಂಡಿರುವ ಫೈಜಾಬಾದ್‌ ಜಿಲ್ಲೆಯ ಬಹಳಷ್ಟು ಮಂದಿಗೆ ಈ ಮರುನಾಮಕರಣದ ಬಗ್ಗೆ ಸಹಮತ ಇಲ್ಲ. ಇದು ಅನಗತ್ಯ ಕ್ರಮ ಎಂದು ಕೆಲವರು ಭಾವಿಸಿದ್ದರೆ, ಇದರ ಹಿಂದಿರುವುದು ರಾಜಕೀಯ ಕಾರಣ ಎಂದು ಹೇಳುತ್ತಿರುವವರು ಕೆಲವರು. ಹೆಸರು ಬದಲಾವಣೆಯಿಂದ ನಗರದ ಚಾರಿತ್ರಿಕ ಅನನ್ಯತೆ ಅಳಿಸಿ ಹೋಗಲಿದೆ ಎಂದು ಭಾವಿಸಿದವರೂ ಇದ್ದಾರೆ.

ಇದಕ್ಕೆ ಇನ್ನೊಂದು ಆಯಾಮವೂ ಇದೆ. ಅಯೋಧ್ಯೆಯ ಪ್ರಾಚೀನ ಪರಂಪರೆಗೆ ಮಾನ್ಯತೆ ಕೊಟ್ಟಂತಾಗಿದೆ ಮತ್ತು ಈ ಪ್ರದೇಶದ ‘ಭವ್ಯತೆ’ ಹೆಚ್ಚಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

74 ವರ್ಷ ವಯಸ್ಸಿನ ಆಯುರ್ವೇದ ವೈದ್ಯ ಪಿ.ಕೆ. ಮೌರ್ಯ ಅವರಿಗೆ ಸರ್ಕಾರದ ಕ್ರಮ ಹಿಡಿಸಿಲ್ಲ. ‘ಇದರ ಅಗತ್ಯ ಏನಿತ್ತು? ರಾಜಕೀಯ ಕಾರಣಕ್ಕಾಗಿಯೇ ಈ ನಿರ್ಧಾರ ಕೈಗೊಂಡಿದ್ದಾರೆ. ಗೊಂದಲದಿಂದಾಗಿ ಸಮಸ್ಯೆ ಆಗುವುದು ಜನರಿಗೆ. ನನ್ನ ನಾಮಫಲಕದಲ್ಲಿರುವ ಫೈಜಾಬಾದ್‌ ಜಿಲ್ಲೆ ಎಂಬುದನ್ನು ಬದಲಾಯಿಸುವುದೇ ಇಲ್ಲ’ ಎಂಬುದು ಮೌರ್ಯ ಅವರ ದೃಢ ನಿಲುವು.

ADVERTISEMENT

18 ವರ್ಷದ ದೀಪಕ್ ಪಾಂಡೆ ಹೆಸರು ಬದಲಾವಣೆಯನ್ನು ಘೋಷಿಸಿದ ‘ದೀಪೋತ್ಸವ’ಕ್ಕೆ ಹೋಗಿದ್ದರು. ‘ನನಗೆ ಇದರಿಂದ ಖುಷಿಯಾಗಿದೆ. ಇದು ಅಗತ್ಯವಾಗಿತ್ತು’ ಎಂದು ಅವರು ಹೇಳುತ್ತಾರೆ.

ಶತಮಾನ ಹಳೆಯ ಹನುಮಾನ್‌ ದೇಗುಲದ ಅರ್ಚಕ ಶಶಿಕಾತ್‌ ದಾಸ್‌ ಅವರೂ ಹೆಸರು ಬದಲಾವಣೆಯಿಂದ ಸಂತಸಪಟ್ಟಿದ್ದಾರೆ. ಈ ಕ್ರಮದಿಂದ ಜಿಲ್ಲೆಯ ಘನತೆ ಹೆಚ್ಚುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಹೆಸರು ಬದಲಾವಣೆ ಅಗತ್ಯವೇ ಇರಲಿಲ್ಲ, ಇದು ರಾಜಕೀಯ ಕ್ರಮ’ ಎಂದುಅಯೋಧ್ಯೆಯ ವಿವಾದಿತ ನಿವೇಶನದಿಂದ 200 ಮೀಟರ್‌ ದೂರದಲ್ಲಿ ನೆಲೆಸಿರುವ ನಿಖಿಲ್‌ ಗೋಸ್ವಾಮಿ ಹೇಳುತ್ತಾರೆ.

‘ಬಿಜೆಪಿಯ ಮುಸ್ಲಿಂ ಮುಖಂಡರ ಹೆಸರನ್ನೂ ಬದಲಿಸಿ’
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ಎಸ್‌ಬಿಎಸ್‌ಪಿಯ ಮುಖ್ಯಸ್ಥ ಓಂ ಪ್ರಕಾಶ್‌ ರಾಜಭರ್‌ ಅವರು ಊರುಗಳ ಹೆಸರು ಬದಲಾವಣೆಯ ಬಿಜೆಪಿ ಕ್ರಮವನ್ನು ಹಂಗಿಸಿದ್ದಾರೆ. ಪಕ್ಷದಲ್ಲಿರುವ ಮುಸ್ಲಿಂ ಮುಖಂಡರ ಹೆಸರನ್ನು ಮೊದಲು ಬದಲಾಯಿಸಿ ಎಂದು ಅವರು ವ್ಯಂಗ್ಯವಾಡಿದ್ದಾರೆ.

‘ಹಲವು ನಗರಗಳ ಹೆಸರುಗಳು ಮೊಘಲ್‌ ದೊರೆಗಳನ್ನು ನೆನಪಿಸುತ್ತಿವೆ ಎಂದು ಬಿಜೆಪಿ ಹೇಳುತ್ತಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರರ ಹೆಸರು ಶಾನವಾಜ್‌ ಹುಸೇನ್‌; ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರು ಕೇಂದ್ರದ ಸಚಿವ; ಉತ್ತರ ಪ್ರದೇಶದಲ್ಲಿ ಮೊಹ್ಸಿನ್‌ ರಜಾ ಎಂಬ ಹೆಸರಿನ ಸಚಿವರಿದ್ದಾರೆ. ಮೊದಲಿಗೆ, ಈ ಮೂವರ ಹೆಸರು ಬದಲಾಯಿಸಬೇಕು’ ಎಂದು ರಾಜ್‌ಭರ್‌ ಹೇಳಿರುವ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.

‘ಜಿ.ಟಿ. ರಸ್ತೆಯನ್ನು ನಿರ್ಮಿಸಿದಾತ ಮುಸ್ಲಿಂ ದೊರೆ ಷೇರ್‌ ಶಾ ಸೂರಿ. ಈ ರಸ್ತೆಯನ್ನು ಧ್ವಂಸ ಮಾಡಬೇಕು. ಜನರು ಈ ರಸ್ತೆಯನ್ನು ಬಳಸುವುದು ಯಾಕೆ? ಹಾಗೆಯೇ ದೆಹಲಿಯ ಕೆಂಪು ಕೋಟೆ ಮತ್ತು ತಾಜ್‌ ಮಹಲ್‌ ಕೂಡ ಬೇಕಿಲ್ಲ. ಇವನ್ನೆಲ್ಲ ನಿರ್ಮಿಸಿದವರು ಯಾರು?’ ಎಂದು ರಾಜ್‌ಭರ್‌ ಪ್ರಶ್ನಿಸಿದ್ದಾರೆ.‌

ಲೋಕಸಭೆ ಚುನಾವಣೆಗೆ ಮುನ್ನ ಇನ್ನಷ್ಟು ಬದಲು
ಗುಜರಾತ್‌ನ ಅಹಮದಾಬಾದ್‌ ನಗರದ ಹೆಸರನ್ನು ಕರ್ಣಾವತಿ ಎಂದು ಬದಲಾಯಿಸುವ ಪ‍್ರಸ್ತಾವ ಇದೆ ಎಂದು ಮುಖ್ಯಮಂತ್ರಿ ವಿಜಯ ರೂಪಾಣಿ ಹೇಳಿದ್ದಾರೆ. ಇದು ಲೋಕಸಭಾ ಚುನಾವಣೆಗೆ ಮೊದಲೇ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ. ಶಿಮ್ಲಾವನ್ನು ಶ್ಯಾಮಲಾ ಎಂದು ಬದಲಾಯಿಸುವುದು ಸೇರಿ ಹಲವು ಊರುಗಳ ಹೆಸರು ಬದಲಾವಣೆ ಚರ್ಚೆ ನಡೆಯುತ್ತಿದೆ.

ಹೈದರಾಬಾದ್‌ ಅಲ್ಲ ಭಾಗ್ಯನಗರ
ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜಧಾನಿ ಹೈದರಾಬಾದ್‌ ಸೇರಿಸಿ ಹಲವು ಪ್ರಮುಖ ನಗರಗಳ ಹೆಸರುಗಳನ್ನು ಬದಲಾಯಿಸಿ ಶ್ರೇಷ್ಠ ವ್ಯಕ್ತಿಗಳ ಹೆಸರು ಇರಿಸಲಾಗುವುದು ಎಂದು ಬಿಜೆಪಿ ಮುಖಂಡ ರಾಜಾ ಸಿಂಗ್‌ ಹೇಳಿದ್ದಾರೆ. ಹೈದರಾಬಾದ್‌ಗೆ ಭಾಗ್ಯನಗರ ಎಂದು ಮರುನಾಮಕರಣ ಮಾಡಲು ಅವರು ಬಯಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.