ADVERTISEMENT

ನೊಯಿಡಾ | ಸಾಲ ಕೊಡುವ ನೆಪದಲ್ಲಿ ಜನರಿಂದ ಶುಲ್ಕ ವಸೂಲಿ; ಏಳು ಮಹಿಳೆಯರ ಬಂಧನ

ಪಿಟಿಐ
Published 23 ಫೆಬ್ರುವರಿ 2024, 10:19 IST
Last Updated 23 ಫೆಬ್ರುವರಿ 2024, 10:19 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನೊಯಿಡಾ: ಸಾಲ ನೀಡುವುದಾಗಿ ಭರವಸೆ ನೀಡಿ ವಂಚಿಸುತ್ತಿದ್ದ ಮಹಿಳೆ ಹಾಗೂ ಆಕೆ ನಡೆಸುತ್ತಿದ್ದ ನಕಲಿ ಕಾಲ್‌ ಸೆಂಟರ್‌ನ ಎಂಟು ಜನರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇವರಲ್ಲಿ ಒಬ್ಬ ಪುರುಷ ಹಾಗೂ ಏಳು ಮಹಿಳೆಯರು ಇದ್ದಾರೆ.

ಉತ್ತರ ಪ್ರದೇಶದ ವಿಶೇಷ ತನಿಖಾ ತಂಡವು (STF) ಈ ಕಾರ್ಯಾಚರಣೆ ಕೈಗೊಂಡಿತ್ತು. ನೊಯಿಡಾ ಸೆಕ್ಟರ್ 63ರ ಕೈಗಾರಿಕಾ ಪ್ರದೇಶದಲ್ಲಿನ ಕಟ್ಟಡವನ್ನು ಬಾಡಿಗೆಗೆ ಪಡೆದು ಆರೋಪಿಗಳು ಕಾಲ್‌ ಸೆಂಟರ್ ನಡೆಸುತ್ತಿದ್ದರು. ಕಳೆದ ಆರು ತಿಂಗಳಲ್ಲಿ ಸುಮಾರು 300 ಜನರಿಗೆ ಸಾಲ ನೀಡುವುದಾಗಿ ಕೋಟಿಗೂ ಹೆಚ್ಚು ರೂಪಾಯಿಯನ್ನು ಇವರು ವಂಚಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ADVERTISEMENT

‘ಇಂಡಿಯಾ ಬುಲ್ಸ್ ಕನ್ಸೂಮರ್ ಫೈನಾನ್ಸ್‌ ಹೆಸರಿನಲ್ಲಿ ಇವರು ಆನ್‌ಲೈನ್ ಮೂಲಕ ಸಾಲ ನೀಡುವ ಭರವಸೆ ನೀಡುತ್ತಿದ್ದರು. ನಕಲಿ ದಾಖಲೆಗಳನ್ನು ಸೃ‌ಷ್ಟಿಸಿ ಅವುಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸುತ್ತಿದ್ದರು’ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ನಕಲಿ ದಾಖಲೆಗಳಲ್ಲಿ ಇಂಡಿಯಾ ಬುಲ್ಸ್ ಹೆಸರಿನ ಗುರುತಿನ ಚೀಟಿಗಳು, ಸಾಲ ಮಂಜೂರಾತಿ ಪತ್ರ ಹಾಗೂ ಸಾಲ ಮಂಜೂರಾಗಿರುವ ಕುರಿತು ಖಾತ್ರಿ ಪತ್ರ, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಇದ್ದವು. ಸಾಲ ಪಾವತಿಗೆ ನೋಂದಾಯಿಸುವ ಶುಲ್ಕ, ಪ್ರೊಸೆಸಿಂಗ್ ಶುಲ್ಕ, ಜಿಎಸ್‌ಟಿ ಹಾಗೂ ವಿಮೆ ಹೆಸರಿನಲ್ಲಿ ಹಣ ವಸೂಲು ಮಾಡುತ್ತಿದ್ದರು ಎಂದೆನ್ನಲಾಗಿದೆ.

ಸಹ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ವಿಕ್ರಂ ಸಿಂಗ್ ಅವರ ನೇತೃತ್ವದಲ್ಲಿ ಎಸ್‌ಟಿಎಫ್‌ನ ಲಖನೌ ಘಟಕ ಈ ಕಾರ್ಯಾಚರಣೆ ನಡೆಸಿದೆ. ಬಂಧಿತರಿಂದ 5 ಮೊಬೈಲ್, 17 ಎಟಿಎಂ ಮತ್ತು ಕ್ರೆಡಿಟ್ ಕಾರ್ಡ್, 3 ಲ್ಯಾಪ್‌ಟಾಪ್‌, 2 ಟ್ಯಾಬ್ಲೆಟ್, 13 ಪ್ರಿ ಆ್ಯಕ್ಟಿವೇಟೆಡ್‌ ಸಿಮ್‌ ಕಾರ್ಡ್‌ಗಳು, 13 ಲೆಕ್ಕಪತ್ರ ಪುಸ್ತಕ, 75 ನಕಲಿ ದಾಖಲೆಗಳು ಹಾಗೂ ಒಂದು ಲಕ್ಷ ಗ್ರಾಹಕರ ವೈಯಕ್ತಿಕ ವಿವರಗಳನ್ನು ಕಾಲ್‌ಸೆಂಟರ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಡೀ ತಂಡವನ್ನು ಛಾಯಾ ಸಿಂಗ್ ಎಂಬುವವರು ನಡೆಸುತ್ತಿದ್ದರು. ಪ್ರಿಯಾ ಶುಕ್ಲಾ, ಆಂಚಲ್ ಚೌಧರಿ, ಸುಲೇಖಾ, ಅಂಕಿತ್ ಸಿಂಗ್, ವಿಜೇಂದ್ರ ಪ್ರತಾಪ್ ಸಿಂಗ್, ಅರ್ಚನಾ ಪ್ರಜಾಪತಿ ಹಾಗೂ ಶಿವಾನಿ ಠಾಕೂರ್‌ ಬಂಧಿತ ಇತರರು.

ನೊಯಿಡಾದ ಸೆಕ್ಟರ್‌ 63ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ 419, 420 ಅಡಿಯಲ್ಲಿ ವಂಚನೆ, 467, 468, 471ರ ಅಡಿಯಲ್ಲಿ ನಕಲಿ ದಾಖಲೆ ಸೃಷ್ಟಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.