ADVERTISEMENT

₹75 ಲಕ್ಷ ದೋಚಲು ಸುಳ್ಳು ಪ್ರಕರಣ: ಬಿಡದಿ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ಅಮಾನತು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 11:42 IST
Last Updated 14 ಡಿಸೆಂಬರ್ 2023, 11:42 IST
<div class="paragraphs"><p>ಇನ್‌ಸ್ಪೆಕ್ಟರ್ ಶಂಕರ್ ನಾಯಕ್‌</p></div>

ಇನ್‌ಸ್ಪೆಕ್ಟರ್ ಶಂಕರ್ ನಾಯಕ್‌

   

ಬೆಂಗಳೂರು: ₹75 ಲಕ್ಷ ದೋಚಲು ಸುಳ್ಳು ಪ್ರಕರಣ ಸೃಷ್ಟಿಸಿದ್ದ ಆರೋಪದಡಿ ಬಿಡದಿ ಠಾಣೆಯ ಇನ್‌ಸ್ಪೆಕ್ಟರ್ ಶಂಕರ್ ನಾಯಕ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಇನ್‌ಸ್ಪೆಕ್ಟರ್ ಮೇಲಿನ ಆರೋಪದ ಬಗ್ಗೆ ವಿಚಾರಣೆ ನಡೆಸಿದ್ದ ಬ್ಯಾಟರಾಯನಪುರ ಉಪವಿಭಾಗದ ಎಸಿಪಿ ಭರತ್ ರೆಡ್ಡಿ ಅವರು, ಬ್ಯಾಟರಾಯನಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ಸದ್ಯ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ADVERTISEMENT

‘ಬ್ಯಾಟರಾಯನಪುರ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಶಂಕರ್ ನಾಯಕ್, ತನ್ನ ವ್ಯಾಪ್ತಿಗೆ ಸೇರದ ಸ್ಥಳದಲ್ಲಿ ನಡೆದಿದ್ದ ಕಳ್ಳತನದ ಸಂಬಂಧ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಯನ್ನು ಬಂಧಿಸಿ ₹72 ಲಕ್ಷ ಜಪ್ತಿ ಮಾಡಿದ್ದರು. ಇದಾದ ನಂತರ, ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು. ದೂರುದಾರರಿಗೆ ವಾಪಸು ಕೊಟ್ಟಿರಲಿಲ್ಲ. ಜೊತೆಗೆ, ₹20 ಲಕ್ಷ ಲಂಚಕ್ಕೂ ಬೇಡಿಕೆ ಇಟ್ಟಿದ್ದರು’ ಎಂಬುದು ಎಸಿಪಿ ವಿಚಾರಣೆಯಿಂದ ತಿಳಿದುಬಂದಿತ್ತು.

ಪ್ರಕರಣದ ಬಗ್ಗೆ ಕಮಿಷನರ್ ಬಿ. ದಯಾನಂದ್ ಅವರು ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ ಅವರಿಗೆ ಇತ್ತೀಚೆಗೆ ವರದಿ ಸಲ್ಲಿಸಿದ್ದರು. ವರದಿ ಪರಿಶೀಲನೆ ನಡೆಸಿರುವ ರವಿಕಾಂತೇಗೌಡ, ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ಅವರನ್ನು ಅಮಾನತು ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ.

‘ಪ್ರಕರಣದ ಬಗ್ಗೆ ಬೆಂಗಳೂರು ಕಮಿಷನರ್ ನೀಡಿದ್ದ ವರದಿ ಆಧರಿಸಿ ಶಂಕರ್ ನಾಯಕ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇಲಾಖೆ ವಿಚಾರಣೆ ಮುಂದುವರಿಯಲಿದೆ’ ಎಂದು ಐಜಿಪಿ ರವಿಕಾಂತೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.