ಶ್ರೀನಗರ: ಇಲ್ಲಿನ ಹೊರವಲಯದ ಹೈದರ್‌ಪೋರಾ ಎಂಬಲ್ಲಿ ಸೇನಾ ಹಾಗೂ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ವೈದ್ಯ ಮುದಸೀರ್ ಗುಲ್ ಹಾಗೂ ಉದ್ಯಮಿ ಅಲ್ತಾಫ್ ಅಹಮದ್ ಭಟ್ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿ ಬುಧವಾರ ಎರಡೂ ಕುಟುಂಬಗಳ ಸದಸ್ಯರು ಶ್ರೀನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಪತ್ರಿಕಾ ಸಮುಚ್ಛಯದ ಆವರಣದಲ್ಲಿ ಜಮಾಯಿಸಿದ 50ಕ್ಕೂ ಮಂದಿ ಮೃತರ ಸಂಬಂಧಿಕರು, ‘ಅಮಾಯಕರನ್ನು ಕೊಲ್ಲುವುದು ನಿಲ್ಲಿಸಿ, ಕಾಶ್ಮೀರಿಗಳ ಮೇಲಿನ ದೌರ್ಜನ್ಯ ತಡೆಗಟ್ಟಿ’ ಎಂಬ ಭಿತ್ತಿಪತ್ರಗಳನ್ನು ಹಿಡಿದು ಸೇನಾ, ಭದ್ರತಾ ಪಡೆ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲೆಫ್ಟಿನಂಟ್ ಗವರ್ನರ್ ಅವರು ಮಧ್ಯಪ್ರವೇಶಿಸಿ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಬೇಕು. ಪ್ರಕರಣವನ್ನು ಎಸ್‌ಐಟಿ ತನಿಖೆಯಿಂದ ಕೈಬಿಟ್ಟು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು. ನಿಗದಿತ ಅವಧಿಯೊಳಗೆ ತನಿಖೆ ಪೂರ್ಣಗೊಳಿಸಬೇಕು. ಕಾಶ್ಮೀರಿಗಳ ಮೇಲೆ ಪೊಲೀಸ್ ಹಾಗೂ ಭದ್ರತಾ ಪಡೆ ನಡೆಸುತ್ತಿರುವ ದೌರ್ಜನ್ಯವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ವೈದ್ಯರಾಗಿದ್ದ ನನ್ನ ಪತಿ ಉಗ್ರರ ತಳಮಟ್ಟದ ಕಾರ್ಯಕರ್ತ ಆಗಿರಲಿಲ್ಲ. ಆದರೂ ಯಾವುದೇ ಆಧಾರಗಳಿಲ್ಲದೇ ನಕಲಿ ಎನ್‌ಕೌಂಟರ್ ನಡೆಸಿ ಪತಿಯನ್ನು ಕೊಲ್ಲಲಾಗಿದೆ. ನನ್ನ ಪತಿಗೆ ಉಗ್ರರ ನಂಟಿದ್ದರೆ ಅದನ್ನು ಬಹಿರಂಗಪಡಿಸಬೇಕು ಎಂದು ಹತ್ಯೆಯಾದ ಮುದಸೀರ್ ಗುಲ್ ಪತ್ನಿ ಹುಮಾರಿಯ ಗುಲ್ ಆಗ್ರಹಿಸಿದರು.
ಒಂದೂವರೆ ವರ್ಷದ ನನ್ನ ಮಗುವಿಗೆ ತಂದೆಯನ್ನು ಎಲ್ಲಿ ತೋರಿಸಲಿ. ಅಪ್ಪನಿಗಾಗಿ ಹಠ ಹಿಡಿದಿರುವ ಪುಟ್ಟ ಕಂದನನ್ನು ಹೇಗೆ ಸಮಾಧಾನ ಪಡಿಸಲಿ ಎಂದು ಅವರು ಕಣ್ಣೀರು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.