ಶಹಜಾನ್‌ಪುರ : ‘ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪುವಿನಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ತಂದೆಯು ಆಸಾರಾಂ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾಗಿ ಹೇಳಿರುವ ವಿಡಿಯೊವೊಂದು ಹರಿದಾಡುತ್ತಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ಬುಧವಾರ ಹೇಳಿದರು.
‘ನಮ್ಮನ್ನು ದಯವಿಟ್ಟು ಕ್ಷಮಿಸಿ. ನನ್ನ ಮಗಳು ಸುಳ್ಳು ಆರೋಪಗಳನ್ನು ಮಾಡಿದ್ದಾಳೆ’ ಎಂದು ಸಂತ್ರಸ್ತೆಯ ತಂದೆ ಹೇಳಿರುವುದು ವಿಡಿಯೊದಲ್ಲಿದೆ. ಪ್ರಸ್ತುತ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವಿಡಿಯೊ ಶೀರ್ಷಿಕೆಯಲ್ಲಿ, ‘ಇವರು 2013ರಲ್ಲಿ ಜೋಧಪುರದ ಆಶ್ರಮದಲ್ಲಿ ಆಸಾರಾಂ ಬಾಪು ಅವರಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ತಂದೆ. ಸಂತ್ರಸ್ತೆಗೆ ಆಗ 16 ವರ್ಷ’ ಎಂದು ಬರೆಯಲಾಗಿದೆ.
ಶಹಜಾನ್‌ಪುರ ಜಿಲ್ಲೆಯ ನಿವಾಸಿಯಾಗಿರುವ ಸಂತ್ರಸ್ತೆಯ ತಂದೆಯು ಮಂಗಳವಾರ ಪೊಲೀಸ್ ಠಾಣೆಗೆ ತೆರಳಿ, ‘ಸಾಮಾಜಿಕ ಜಾಲತಾಣದಲ್ಲಿ ಆಸಾರಾಂ ಅವರ ಅನುಯಾಯಿಗಳಿಂದ ವಿಡಿಯೊವೊಂದು ಹರಿದಾಡುತ್ತಿದೆ. ಅವರೆಲ್ಲರೂ ನನ್ನನ್ನು ಮತ್ತು ನನ್ನ ಕುಟುಂಬವನ್ನು ದೂಷಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ವಿಡಿಯೊದಲ್ಲಿ ಇರುವುದು ನಾನಲ್ಲ ಎಂದು ಸಂತ್ರಸ್ತೆಯ ತಂದೆ ನಮಗೆ ಲಿಖಿತ ಹೇಳಿಕೆ ನೀಡಿದ್ದಾರೆ. ದುಷ್ಟ ಉದ್ದೇಶದಿಂದ ವಿಡಿಯೊವನ್ನು ಪ್ರಸಾರ ಮಾಡಿದ ಘಟನೆಯಲ್ಲಿ ಭಾಗಿಯಾದವರ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ’ ಎಂದು ಎಸ್‌ಪಿ ಅಶೋಕ್ ಕುಮಾರ್ ಮೀನಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.