ನವದೆಹಲಿ: ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಬಜೆಟ್‌ನಲ್ಲಿ ಶೇ 15ರಷ್ಟು ಮೊತ್ತವನ್ನು ಮುಸ್ಲಿಮರಿಗೆ ಮೀಸಲಿಡಲು ಬಯಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದು ಶುದ್ಧ ಸುಳ್ಳು ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ಗುರುವಾರ ಹೇಳಿದರು.
ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸುವ ಹೇಳಿಕೆ ನೀಡಿದ್ದರೆ ನಾನು ಸಾರ್ವಜನಿಕ ಜೀವನದಲ್ಲಿರಲು ಯೋಗ್ಯನಲ್ಲ ಎಂದು ಪ್ರಧಾನಿ ಈಚೆಗೆ ಹೇಳಿದ್ದರು. ಅದರ ಮರುದಿನವೇ ಮತ್ತೆ ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿದರು.
‘ಮೋದಿ ಅವರ ಹೇಳಿಕೆಗಳು ಅತ್ಯಂತ ವಿಚಿತ್ರವಾಗಿವೆ. ಅವರಿಗೆ ಭಾಷಣ ಬರೆದುಕೊಡುವವರು ಹಳಿ ತಪ್ಪಿದ್ದಾರೆ’ ಎಂದು ‘ಎಕ್ಸ್’ನಲ್ಲಿ ಆರೋಪಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಬಜೆಟ್ ಮತ್ತು ಹಿಂದೂ ಬಜೆಟ್ ಮಂಡಿಸಲಿದೆ ಎಂದು ಮೋದಿ ಅವರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಚಿದಂಬರಂ, ‘ಸಂವಿಧಾನದ 112ನೇ ವಿಧಿಯ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಒಂದು ಬಾರಿ ಮಾತ್ರ ಬಜೆಟ್ ಮಂಡಿಸಬಹುದಾಗಿದೆ. ಹೀಗಿರುವಾಗ ಎರಡು ಬಜೆಟ್ ಮಂಡಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
ಮೋದಿ ಅವರ ಮಾತುಗಳನ್ನು ಕೇವಲ ಭಾರತೀಯರು ಮಾತ್ರ ಆಲಿಸುತ್ತಿಲ್ಲ. ಇಡೀ ಜಗತ್ತೇ ಕೇಳಿಸುತ್ತಿದೆ ಮತ್ತು ಅದನ್ನು ವಿಶ್ಲೇಷಿಸುತ್ತಿದೆ. ಇದು ದೇಶಕ್ಕೆ ಕೀರ್ತಿ ತರದು ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.