ಲಖಿಂಪುರ: ಉತ್ತರ ಪ್ರದೇಶದ ಲಖಿಂಪುರ ಖೇರಿಯ ಟಿಕುನಿಯಾ ಎಂಬಲ್ಲಿ ಭಾನುವಾರ ನಡೆದ ದುರ್ಘಟನೆ ವೇಳೆ ಮಡಿದ ನಾಲ್ವರು ರೈತರ ಪೈಕಿ ಇಬ್ಬರು ರೈತರ ಕುಟುಂಬಗಳು ಮೃತದೇಹಗಳ ಮರಣೋತ್ತರ ವರದಿ ಬರುವ ವರೆಗೆ ಅಂತಿಮ ಸಂಸ್ಕಾರ ನಡೆಸದಿರಲು ನಿರ್ಧರಿಸಿವೆ.
ಅಂತ್ಯಸಂಸ್ಕಾರ ನಡೆಸದೇ ಇರುವ ನಿರ್ಧಾರವನ್ನು ಕುಟುಂಬಸ್ಥರು ತೆಗೆದುಕೊಳ್ಳುತ್ತಲೇ ಲಖನೌ ಐಜಿಪಿ ಲಕ್ಷ್ಮಿ ಸಿಂಗ್ ಟಿಕುನಿಯಾಕ್ಕೆ ದೌಡಾಯಿಸಿದರು. ಮೃತ ರೈತ ನಚ್ಚತಾರ್ ಸಿಂಗ್ ಮನೆಗೆ ತೆರಳಿದ ಅವರು, ಈ ವಿಷಯವಾಗಿ ಕುಟುಂಬಸ್ಥರ ಜೊತೆಗೆ ಚರ್ಚೆ ನಡೆಸಿದರು. ಮೃತ ರೈತನ ಮನೆಯ ಬಳಿ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು ಎಂದು ವರದಿಯಾಗಿದೆ.
ಮತ್ತೊಬ್ಬ ರೈತ ಲವ್‌ಪ್ರೀತ್ ಸಿಂಗ್ ಅವರ ಅಂತ್ಯಸಂಸ್ಕಾರವನ್ನೂ ಕುಟುಂಬಸ್ಥರು ನಿಲ್ಲಿಸಿದ್ದಾರೆ. ಅಂತ್ಯಸಂಸ್ಕಾರದ ನಂತರ ಪೊಲೀಸರು ಮರಣೋತ್ತರ ವರದಿಯನ್ನು ತಿರುಚುವ ಸಾಧ್ಯತೆಗಳಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪರಿಹಾರ ಸೇರಿದಂತೆ ಅವರ ಕುಟುಂಬಗಳ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡ ನಂತರ ಸೋಮವಾರ ಸಂಜೆ ವೈದ್ಯರ ತಂಡವು ರೈತರ ಮರಣೋತ್ತರ ಪರೀಕ್ಷೆಯನ್ನು ನಡೆಸಿತು. ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಸೋಮವಾರ ತಡರಾತ್ರಿ ಕುಟುಂಬಗಳಿಗೆ ಹಿಂತಿರುಗಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.