ಅಮೇಠಿ, ಉತ್ತರ ಪ್ರದೇಶ: ಸರ್ಕಾರಿ ಶಾಲೆ ಶಿಕ್ಷಕ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗುರುವಾರ ರಾತ್ರಿ ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಸುನೀಲ್ (35) ಪೂನಮ್ (32) ದೃಷ್ಟಿ (6) ಹಾಗೂ ಒಂದು ವರ್ಷದ ಗಂಡು ಮಗು ಎಂದು ಗುರುತಿಸಲಾಗಿದೆ.
ಅಮೇಠಿ ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರ ಇರುವ ಪಾನಹುನಾ ಎಂಬಲ್ಲಿ ಸುನೀಲ್ ಅವರು ಸರ್ಕಾರಿ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅದೇ ಊರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು.
‘ಗುರುವಾರ ರಾತ್ರಿ ಅವರ ಮನೆಯಿಂದ ಗುಂಡಿನ ಸದ್ದು ಕೇಳಿ ನೆರೆಹೊರೆಯವರು ಓಡಿ ಬಂದಾಗ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿರುವುದು ಗೊತ್ತಾಗಿದೆ. ಸುನೀಲ್ ಕುಟುಂಬಕ್ಕೆ ಪರಿಚಿತರಾಗಿದ್ದವರೇ ಕೃತ್ಯ ಎಸಗಿರುವ ಅನುಮಾನ ಇದೆ. ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದೆ’ ಎಂದು ಅಮೇಠಿ ಎಸ್‌ಪಿ ಅನೂಪ್ ಕುಮಾರ್ ಸಿಂಗ್ ಹೇಳಿದ್ದಾರೆ.
ದಲಿತ ಕುಟುಂಬಕ್ಕೆ ಸೇರಿದ ರಾಯ್ ಬರೇಲಿ ಮೂಲದ ಸುನೀಲ್ ಅವರು ಕಳೆದ ತಿಂಗಳು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ರಾಯ್ ಬರೇಲಿಯ ಚಂದನ್ ವರ್ಮಾ ಎನ್ನುವರ ವಿರುದ್ಧ ದೂರು ದಾಖಲಿಸಿದ್ದರು. ನಮಗೇನಾದರೂ ತೊಂದರೆ ಆದರೆ ಚಂದನ್ ವರ್ಮಾನೇ ಹೊಣೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆದಷ್ಟು ಬೇಗ ಹಂತಕರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ‘ಶಿಕ್ಷಕ ಸುನಿಲ್ ಪತ್ನಿ ಪೂನಂ ಅವರು ಆಗಸ್ಟ್ 18ರಂದು ಚಂದನ್ ವರ್ಮಾ ವಿರುದ್ಧ ಚುಡಾಯಿಸಿದ ಆರೋಪದ ಮೇಲೆ ಎಸ್.ಸಿ–ಎಸ್.ಟಿ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿದ್ದರು. ನಮ್ಮ ಕುಟುಂಬಕ್ಕೆ ಏನೇ ಆದರೂ ವರ್ಮಾನೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು’ ಎಂದು ಎಸ್ಪಿ ತಿಳಿಸಿದರು.
‘ಘಟನೆ ನಡೆದ ತಕ್ಷಣವೇ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿ ನಿಶಾ ಅನಂತ್, ಎಸ್ಪಿ ಅನೂಪ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿದ್ದು, ರಾಜಧಾನಿ ಲಖನೌದಿಂದಲೂ ಅಧಿಕಾರಿಗಳು ಅಮೇಠಿಗೆ ತೆರಳಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
‘ಗುಂಡಿನ ಸದ್ದು ಕೇಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದೆವು. ಮನೆಗೆ ತೆರಳಿ ನೋಡುವ ವೇಳೆ ಹಿಂಭಾಗದಲ್ಲಿ ಎಲ್ಲರೂ ಮೃತಪಟ್ಟಿದ್ದರು’ ಎಂದು ನೆರೆಮನೆಯವರು ತಿಳಿಸಿದ್ದಾರೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಐದು ತಂಡ ರಚಿಸಲಾಗಿದೆ. ಸ್ಥಳೀಯ ಗುಪ್ತಚರ ವಿಭಾಗ ಹಾಗೂ ವಿಶೇಷ ಕಾರ್ಯಾಚರಣೆ ತಂಡವು ಕೂಡ ತನಿಖೆಗೆ ಕೈ ಜೋಡಿಸಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಸಿ.ಸಿ.ಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿ, ಹಂತಕರ ಗುರುತು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ ಐಜಿಪಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ರಾಯ್ ಬರೇಲಿ (ಪಿಟಿಐ): ಹತ್ಯೆಗೊಳಗಾದ ಶಿಕ್ಷಕನ ತಂದೆ ಜತೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ದೂರವಾಣಿಯಲ್ಲಿ ಮಾತನಾಡಿದರು.
ಮೃತರು, ರಾಯ್ ಬರೇಲಿ ಕ್ಷೇತ್ರದ ಸುಧಾಮಪುರಿ ಗ್ರಾಮದ ಉಂಚಾಹಾರ್ ಪ್ರದೇಶದವರು. ಮೃತ ಶಿಕ್ಷಕನ ತಂದೆ ರಾಮ್‌ಗೋಪಾಲ್ ಅವರು ಮೃತದೇಹಗಳನ್ನು ಸ್ವಗ್ರಾಮಕ್ಕೆ ತಂದರು. ರಾಹುಲ್ ಗಾಂಧಿ ಸೂಚನೆಯಂತೆ, ಅಮೇಠಿ ಕ್ಷೇತ್ರದ ಸಂಸದ ಕಿಶೋರಿ ಲಾಲ್ ಕೂಡ ಜತೆಗಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿ ಮಾಡಿದ್ದು, ನೋವು ತೋಡಿಕೊಂಡಿರುವುದು ದೃಶ್ಯದಲ್ಲಿದೆ.
ಅಮೇಠಿ (ಪಿಟಿಐ): ‘ನನ್ನ ಮಗನನ್ನು ಕೊಂದ ರೀತಿಯಲ್ಲೇ ಹಂತಕರು ಸಾಯಲಿ’...
– ಇದು ಮೃತ ಶಿಕ್ಷಕ ಸುನಿಲ್ ಅವರ ತಂದೆ ರಾಮ್‌ಗೋಪಾಲ್ ಅವರ ಆಕ್ರೋಶದ ನುಡಿ. ಇಡೀ ಕುಟುಂಬಕ್ಕೆ ಮಗನೇ ಆಧಾರಸ್ತಂಭವಾಗಿದ್ದರು. ನಾಲ್ವರು ಹತ್ಯೆಯಾಗಿರುವುದು ಹೆತ್ತವರಲ್ಲಿ ನೋವಿನ ಜತೆಗೆ ಆಕ್ರೋಶ ಉಂಟುಮಾಡಿದೆ.
‘ನನ್ನ ಮಗ ನಮ್ಮನ್ನು ಬಿಟ್ಟು ಹೋಗಿದ್ದಾನೆ. ನಾನು ಹೊರಟರೆ, ಮನೆ ನೋಡಿಕೊಳ್ಳುವವರು ಯಾರೂ ಇಲ್ಲ. ನನಗೀಗ 60 ವರ್ಷ. ಮತ್ತೊಬ್ಬ ಮಗನಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದಾನೆ. ಆತನಿಗೆ ಕೆಲಸ ಸಿಕ್ಕಿದರೆ, ಮುಂದಿನ ದಿನಗಳಲ್ಲಿ ಒಳ್ಳೆಯದಾಗಬಹುದು’ ಎಂದರು.
‘ಚಂದನ್ ವರ್ಮಾ ಯಾರು ಎಂಬುದು ನನಗೆ ಗೊತ್ತಿಲ್ಲ. ಅವರ ಜಾತಿಯೂ ತಿಳಿದಿಲ್ಲ. ಪ್ರಕರಣ ದಾಖಲಿಸಿದ್ದ ಕುರಿತು, ಸೊಸೆ ತಿಳಿಸಿದ್ದಳು. ಅಂದೇ ಕ್ರಮ ಕೈಗೊಂಡಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ’ ಎಂದು ಅವರು ನೆನಪಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.