ಹೈದರಾಬಾದ್: ‘ಕುಟುಂಬಗಳ ಪ್ರಾಬಲ್ಯವುಳ್ಳ ರಾಜಕೀಯ ಪಕ್ಷಗಳು ದೇಶದ ಅತಿದೊಡ್ಡ ಶತ್ರು’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ‘ಕುಟುಂಬದ ಏಳಿಗೆಗಷ್ಟೇ ಇಂತಹ ಪಕ್ಷಗಳು ಒತ್ತು ನೀಡಲಿವೆ’ ಎಂದೂವಾಗ್ದಾಳಿ ನಡೆಸಿದ್ದಾರೆ.
ಇಲ್ಲಿಗೆ ಒಂದು ದಿನದ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಬೇಗಂಪೇಟ್ ವಿಮಾನನಿಲ್ದಾಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತೆಲಂಗಾಣದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ ಎಂದು ಆರೋಪಿಸಿದರು.
ಪರಿವಾರ ಆಧರಿತ ಪಕ್ಷಗಳ ವಿರುದ್ಧ ನೇರ ದಾಳಿ ನಡೆಸಿದ ಅವರು, ‘ಈ ಪಕ್ಷಗಳು ದೇಶದ ರಾಜಕಾರಣದ ದೊಡ್ಡ ಸಮಸ್ಯೆಗಳಷ್ಟೇ ಅಲ್ಲ. ಪ್ರಜಾಪ್ರಭುತ್ವ ಮತ್ತು ದೇಶದ ಯುವಜನರ ಪಾಲಿಗೆ ಅತಿದೊಡ್ಡ ಶತ್ರುವೂ ಹೌದು’ ಎಂದು ವ್ಯಾಖ್ಯಾನಿಸಿದರು.
ರಾಜ್ಯದ ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪರೋಕ್ಷವಾಗಿ ಉಲ್ಲೇಖಿಸಿದ ಅವರು, ‘ಕುಟುಂಬ ಆಧರಿತ ಪಕ್ಷಗಳು ಹೇಗೆ ಕುಟುಂಬದ ಏಳಿಗೆಯನ್ನಷ್ಟೇ ಬಯಸಲಿವೆ ಎಂಬುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ.ಈ ಪಕ್ಷಗಳು ಎಂದಿಗೂ ಬಡವರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ನಿರ್ದಿಷ್ಟ ಕುಟುಂಬಕ್ಕಷ್ಟೇ ಬದ್ಧವಾದ ಪಕ್ಷದಲ್ಲಿ ಭ್ರಷ್ಟಾಚಾರ ಹೇಗೆ ಹಾಸುಹೊಕ್ಕಾಗಿದೆ ಎಂಬುದನ್ನು ದೇಶ ನೋಡಿದೆ’ ಎಂದು ಹೇಳಿದರು.
ಮೂಢನಂಬಿಕೆ ಕುರಿತಂತೆಯೂ ಪ್ರಧಾನಿ ಅವರು ಕೆಸಿಆರ್ ವಿರುದ್ಧ ಹರಿಹಾಯ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅವರಿಗೂ ಹಿಂದೆ ಒಂದು ಸ್ಥಳಕ್ಕೆ ಭೇಟಿ ನೀಡದಂತೆ ಸಲಹೆ ನೀಡಲಾಗಿತ್ತು. ಅದನ್ನು ಮೀರಿ ಯೋಗಿ ಭೇಟಿ ನೀಡಿದ್ದರು ಎಂದು ಸ್ಮರಿಸಿದರು.
ವಾಸ್ತುದೋಷವಿದೆ ಎಂಬ ಹೇಳಿಕೆಯನ್ನು ಆಧರಿಸಿ ಕೆಸಿಆರ್ ಅವರು 2016ರಲ್ಲಿ ಮನೆ ಬದಲಾಯಿಸಿದ್ದರು ಎಂದು ವರದಿಯಾಗಿತ್ತು.
'ಆಡಳಿತ ವ್ಯವಸ್ಥೆಯ ಹೊಸ ವ್ಯಾಖ್ಯಾನ’
ಜಿ–20 ಶೃಂಗದ ಸದಸ್ಯ ರಾಷ್ಟ್ರಗಳಲ್ಲಿಯೇ ಆರ್ಥಿಕತೆ ಅತಿ ವೇಗವಾಗಿ ಬೆಳೆಯುತ್ತಿರುವ ದೇಶ ಭಾರತವಾಗಿದೆ ಎಂದು ಪ್ರಧಾನಿ ಮೋದಿ ಗುರುವಾರ ಇಲ್ಲಿ ಹೇಳಿದರು.
ಇಲ್ಲಿನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ನ (ಐಎಸ್‌ಬಿ) 20ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಸ್ಟಾರ್ಟ್ಅಪ್‌ಗಳ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಾಣ ಸೇರಿದಂತೆ ಸರ್ಕಾರದ ವಿವಿಧ ಸಾಧನೆಗಳನ್ನು ಪಟ್ಟಿಮಾಡಿದರು.
‘ಸುಧಾರಣೆ, ಸಾಧನೆ ಮತ್ತು ಪರಿವರ್ತನೆ’ ಎಂಬುದು ದೇಶದ ಆಡಳಿತ ವ್ಯವಸ್ಥೆಯ ಮಂತ್ರವಾಗಿದೆ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.