ನಾಗ್ಪುರ: ‘ಜಾಗತಿಕ ಮಟ್ಟದಲ್ಲಿ ಕುಟುಂಬ ವ್ಯವಸ್ಥೆ ಕುಸಿಯುತ್ತಿದೆ. ಆದರೆ ಭಾರತದಲ್ಲಿ ಈ ವ್ಯವಸ್ಥೆ ಇಂದಿಗೂ ಬಲಿಷ್ಠವಾಗಿರುವುದಕ್ಕೆ ‘ಸತ್ಯ’ ಎಂಬುದು ಅದರ ತಳಹದಿಯಾಗಿರುವುದೇ ಕಾರಣ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ನಾಗ್ಪುರದಲ್ಲಿ ಹಿರಿಯ ನಾಗರಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸತ್ಯದ ಆಧಾರದಲ್ಲಿರುವ ನಮ್ಮ ಸಂಸ್ಕೃತಿಯನ್ನು ಬುಡಮೇಲು ಮಾಡುವ ಕೆಲ ಪ್ರಯತ್ನಗಳು ನಡೆಯುತ್ತಿವೆ. ಆಸ್ಮಾನಿ ಮತ್ತು ಸುಲ್ತಾನಿಗಳು ನಮ್ಮ ಸಂಸ್ಕೃತಿಯನ್ನು ನಾಶಮಾಡುವ ಯತ್ನ ನಡೆಸಿದ್ದಾರೆ. ತಮ್ಮ ಸ್ವಾರ್ಥ ಸಾಧನೆಯ ತತ್ವಗಳ ಆಧಾರವಾದ ‘ಸಾಂಸ್ಕೃತಿಕ ಮಾರ್ಕ್ಸ್‌ವಾದ’ವನ್ನು ಮುಂದಿಟ್ಟುಕೊಂಡು ಬೇರೊಂದು ಸಂಸ್ಕೃತಿಯನ್ನು ಹೇರಲು ಹೊರಟಿದ್ದಾರೆ. ಜಗತ್ತಿನ ಇತರ ಪ್ರದೇಶಗಳಲ್ಲಿ ಸಂಸ್ಕೃತಿಯನ್ನೇ ಅನುಸರಿಸಲು ಹೊರಟಿರುವವರ ಸಂಖ್ಯೆ ಮಿತಿ ಮೀರಿದೆ. ಕೆಲವರು ಅದನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ. ಇದುವೇ ಇಂದಿನ ಸಾಂಸ್ಕೃತಿಕ ಮಾರ್ಕ್ಸ್‌ವಾದವಾಗಿದೆ’ ಎಂದಿದ್ದಾರೆ.
‘ಒಳ್ಳೆಯ ಹೆಸರನ್ನಿಟ್ಟುರುವ ಈ ಜನ ಅನೈತಿಕತೆಯನ್ನೇ ಬೆಂಬಲಿಸುತ್ತಿದ್ದಾರೆ. ಸಮಾಜದಲ್ಲಿ ಇಂಥದ್ದನ್ನು ಪ್ರಸಾರ ಮಾಡಿ ತಮ್ಮ ಪ್ರಾಬಲ್ಯವನ್ನು ಮೆರೆಯುವ ಉದ್ದೇಶ ಹೊಂದಿದ್ದಾರೆ’ ಎಂದು ಭಾಗವತ್ ಆರೋಪಿಸಿದ್ದಾರೆ.
‘ಬೇರೆ ಬೇರೆ ತತ್ವ ಹಾಗೂ ಸಿದ್ಧಾಂತಗಳನ್ನು ಪ್ರತಿಪಾದಿಸುವ ಇವರು ಒಳ್ಳೆಯದನ್ನು ನಾಶಪಡಿಸುತ್ತಿದ್ದಾರೆ. ಇಂಥ ತತ್ವಗಳಿಂದ ನಮ್ಮ ದೇಶ ಮಾತ್ರವಲ್ಲದೇ ಇಡೀ ಜಗತ್ತಿನಲ್ಲೇ ಕುಟುಂಬ ವ್ಯವಸ್ಥೆಯನ್ನು ನಾಶಪಡಿಸುವುದು ಇವರ ಉದ್ದೇಶ. ಆದರೆ ಇಂಥ ಸುಂದರ ಕುಟುಂಬ ವ್ಯವಸ್ಥೆಯನ್ನು ತನ್ನ ‘ಸತ್ಯ’ದ ಆಧಾರದಲ್ಲಿ ಉಳಿಸಲು ಭಾರತಕ್ಕೆ ಮಾತ್ರ ಸಾಧ್ಯ. ನಮ್ಮ ಬೇರು ಕೂಡಾ ಅಲ್ಲಿಯೇ ಇದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.