ADVERTISEMENT

ಒಡಿಶಾದಲ್ಲಿ ಫೋನಿ ಆರ್ಭಟಕ್ಕೆ 5 ಬಲಿ, ಸಾವಿರಾರು ಮರಗಳು ನಾಶ

​ಪ್ರಜಾವಾಣಿ ವಾರ್ತೆ
Published 3 ಮೇ 2019, 7:10 IST
Last Updated 3 ಮೇ 2019, 7:10 IST
   

ಭುವನೇಶ್ವರ/ನವದೆಹಲಿ: ‘ಫೋನಿ’ ಚಂಡಮಾರುತ ಪುರಿ ಸಮೀಪದ ಕರಾವಳಿ ತೀರವನ್ನು ಪ್ರವೇಶಿಸಿದ್ದು ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು ಫೋನಿಯಾ ಆರ್ಭಟಕ್ಕೆ ಐವರು ಬಲಿಯಾಗಿದ್ದಾರೆ.

ಇತ್ತೀಚಿನ ಮಾಹಿತಿಗಳ ಪ್ರಕಾರ ಗಂಟೆಗೆ 180 ಕಿ.ಮೀಟರ್ ವೇಗದಲ್ಲಿ ಭಾರಿ ಗಾಳಿ ಬೀಸುತ್ತಿರುವುದರಿಂದ ಒಡಿಶಾದ ಕರಾವಳಿ ತೀರ ಸೇರಿದಂತೆ ಪುರಿಯ ಸುತ್ತ ಮುತ್ತಲಿನಲ್ಲಿ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಸಾವಿರಾರು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ADVERTISEMENT

ಪುರಿಯಲ್ಲಿ ಮನೆಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಭುವನೇಶ್ವರ, ಗಂಜಾಮ್‌ ಮತ್ತು ಬಾಲಸೋರ್‌ನಲ್ಲಿ ಮೂವರು ಮಳೆಗೆ ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಫೋನಿಯ ಅಬ್ಬರ ಆಂಧ್ರಪ್ರದೇಶದಲ್ಲೂ ಮುಂದುವರೆದಿದ್ದು ಶ್ರೀಕಾಕುಳಂನಲ್ಲಿ 20ಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿವೆ. ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಒಡಿಶಾದ ರಾಜಧಾನಿ ಭುವನೇಶ್ವರ ಸೇರಿದಂತೆ ಕರಾವಳಿ ತೀರದ 15 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್ ಸಂಪರ್ಕವನ್ನು ನಿಲ್ಲಿಸಲಾಗಿದೆ. ಬಸ್‌ಸಂಚಾರ, ರೈಲು ಸಂಚಾರ ಮತ್ತು ವಿಮಾನ ಸಂಚಾರವನ್ನು ನಿಲ್ಲಿಸಲಾಗಿದೆ. ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

10 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದ್ದು ಸಾವಿರಾರು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಹೆಲಿಕಾಫ್ಟರ್‌ ಮೂಲಕ ಆಹಾರ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಫೋನಿಯಾ ಅಬ್ಬರಕ್ಕೆ ಒಡಿಶಾ, ಆಂಧ್ರ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ತೀರ ಪ್ರದೇಶಗಳಲ್ಲಿ ಸಾಕಷ್ಟು ಹಾನಿ ಸಂಭವಿಸುವ ಸಾಧ್ಯತೆಗಳಿವೆ. ಅನಾಹುತಗಳನ್ನು ತಪ್ಪಿಸಲು ವಿಪತ್ತು ನಿರ್ವಹಣ ಪಡೆಗಳು, ಸೇನೆ, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.