ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಶನಿವಾರ ಭೇಟಿ ಮಾಡಿದ್ದ ಸಂದರ್ಭದಲ್ಲಿ ನಟ ರಜನೀಕಾಂತ್ ಅವರು ಆದಿತ್ಯನಾಥ ಅವರ ಪಾದಮುಟ್ಟಿ ನಮಸ್ಕರಿಸಿದ್ದರು. ಇದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದ ಹುಟ್ಟುಹಾಕಿದೆ.
ಸೂಪರ್ ಸ್ಟಾರ್ ನಡೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪರ–ವಿರೋಧ ಚರ್ಚೆಗಳೂ ನಡೆಯುತ್ತಿವೆ.
72 ವರ್ಷದ ರಜನೀಕಾಂತ್ ಅವರು 51 ವರ್ಷದ ಆದಿತ್ಯನಾಥ ಪಾದ ಮುಟ್ಟಿ ನಮಸ್ಕರಿಸಿದ್ದು ಸರಿಯಲ್ಲ ಎಂದು ಕೆಲವು ಅಭಿಪ್ರಾಯಪಟ್ಟಿದ್ದಾರೆ. ಅವರ ಕಟ್ಟಾ ಅಭಿಮಾನಿಗಳು ಮಾತ್ರ ರಜನೀಕಾಂತ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಆದಿತ್ಯನಾಥ ಅವರು ಯೋಗಿಯೂ ಆಗಿದ್ದು ಗೋರಖನಾಥ ಮಠದ ಮುಖ್ಯಸ್ಥರೂ ಆಗಿರುವ ಕಾರಣ ಅವರ ಪಾದಕ್ಕೆರಗಿ ನಮಸ್ಕರಿಸಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ವಯಸ್ಸಿನಲ್ಲಿ ತಮಗಿಂತ ಚಿಕ್ಕವರಿದ್ದರೂ ಮಠಾಧೀಶರಾಗಿರುವವರ ಪಾದ ಮುಟ್ಟಿ ರಜನೀಕಾಂತ್ ನಮಸ್ಕರಿಸಿರುವ ಹಳೆಯ ವಿಡಿಯೊಗಳನ್ನು ಸಹ ಕೆಲವರು ಹಂಚಿಕೊಂಡಿದ್ದಾರೆ.
ಇನ್ನೊಂದೆಡೆ ಈ ವಿವಾದ ಭುಗಿಲೆದ್ದ ಬೆನ್ನಲ್ಲೇ ಮತ್ತೊಬ್ಬ ತಮಿಳು ನಟ ದಳಪತಿ ವಿಜಯ್ ಅವರ ತಂದೆ ಎಸ್.ಎ.ಚಂದ್ರಶೇಖರ್ ಅವರು ಇತ್ತೀಚೆಗೆ ರಜನೀಕಾಂತ್ ಅವರ ಪಾದ ಮುಟ್ಟಿ ನಮಸ್ಕರಿಸಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ರಜನೀಕಾಂತ್ ಮತ್ತು ವಿಜಯ್ ಅಭಿಮಾನಿಗಳ ನಡುವೆ ಜಟಾಪಟಿಗೂ ಕಾರಣವಾಗಿದೆ.
ತಮ್ಮ ಚಿತ್ರ ‘ಜೈಲರ್’ ಪ್ರಚಾರಕ್ಕಾಗಿ ಲಖನೌಗೆ ಭೇಟಿ ನೀಡಿರುವ ರಜನೀಕಾಂತ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಶನಿವಾರ ಭೇಟಿ ಮಾಡಿದ್ದರು.
ಓದಿ... ಅಯೋಧ್ಯೆ: ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಟ ರಜನಿಕಾಂತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.