ಚಂಡೀಗಡ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್ ಯುವ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಹಾರಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಮನೆ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದ್ದರಿಂದಾಗಿ ಬುಧವಾರ ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದ್ದಾರೆ.
ನಂತರ ಪೊಲೀಸರು ಹಲವಾರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಖಟ್ಟರ್ ಅವರ ಅಧಿಕೃತ ನಿವಾಸಕ್ಕೆ 'ಘೇರಾವ್' ಹಾಕಲು ಪ್ರತಿಭಟನಾಕಾರರು ಯೋಜಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯಕರ್ತ ಮಾತನಾಡಿ, 'ದೆಹಲಿ ಚಲೋ'ಗೆ ತೆರಳುತ್ತಿದ್ದ ಸಾವಿರಾರು ರೈತರನ್ನು ತಡೆದಿದ್ದಕ್ಕಾಗಿ ಮತ್ತು ಅವರ ಮೇಲೆ ಜಲ ಫಿರಂಗಿ, ಅಶ್ರುವಾಯು ಪ್ರಯೋಗಿಸಿದ್ದಕ್ಕಾಗಿ ಖಟ್ಟರ್ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಖಟ್ಟರ್ ಅವರ ಅಧಿಕೃತ ನಿವಾಸದಿಂದ ಮೂರು ಕಿ.ಮೀ. ದೂರದಲ್ಲಿರುವ ಬ್ಯಾರಿಕೇಡ್‌ಗಳನ್ನು ಹಾರಲು ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಚಂಡೀಗಡ ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದ್ದಾರೆ. ಆದರೆ ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟಿ ಮುಖ್ಯಮಂತ್ರಿ ನಿವಾಸದ ಹತ್ತಿರ ತಲುಪಲು ಯಶಸ್ವಿಯಾದ ಕೆಲವು ಕಾರ್ಯಕರ್ತರನ್ನು ಪೊಲೀಸರು ತಡೆದರು.
ಈ ಹಿನ್ನೆಲೆಯಲ್ಲಿ ಖಟ್ಟರ್ ನಿವಾಸದ ಸುತ್ತ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
ಕೃಷಿ ಕಾನೂನನ್ನು ವಿರೋಧಿಸಿ ರಾಷ್ಟ್ರ ರಾಜಧಾನಿಯತ್ತ ಹೊರಟಿದ್ದ ಪಂಜಾಬ್ ರೈತರು ರಾಜ್ಯವನ್ನು ಪ್ರವೇಶಿಸುವುದನ್ನು ಹರಿಯಾಣ ಪೊಲೀಸಲು ತಡೆಯಲು ಪ್ರಯತ್ನಿಸಿದ್ದರು. ಹೀಗಿದ್ದರೂ ಪಂಜಾಬ್-ಹರಿಯಾಣ ಗಡಿಭಾಗಗಳಲ್ಲಿ ಎಲ್ಲ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಿ ಮುನ್ನಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.