ನವದೆಹಲಿ: ‘ಹೊಸ ಕಾಯ್ದೆಗಳು ಕೃಷಿಕರಿಗೆ ಹೆಚ್ಚಿನ ಸೌಲಭ್ಯ ಮತ್ತು ಅಧಿಕಾರವನ್ನು ನೀಡಿವೆಯೇ ವಿನಾ ಹಿಂದೆ ಅನುಭವಿಸುತ್ತಿದ್ದ ಯಾವುದೇ ಅಧಿಕಾರ ಮತ್ತು ಸೌಲಭ್ಯವನ್ನು ಕಿತ್ತುಕೊಂಡಿಲ್ಲ. ಈ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ವಿಚಾರದಲ್ಲಿ ಸರ್ಕಾರವು ಸುಪ್ರೀಂ ಕೋರ್ಟ್‌ನ ಸೂಚನೆಯನ್ನು ಪಾಲಿಸಲಿದೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದರು.
ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ಕೆಂಪುಕೋಟೆಯಲ್ಲಿ ಧಾರ್ಮಿಕ ಧ್ವಜಾರೋಹಣ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
‘ತ್ರಿವರ್ಣ ಧ್ವಜ ಹಾಗೂ ಪವಿತ್ರ ದಿನಕ್ಕೆ (ಗಣರಾಜ್ಯೋತ್ಸವ) ಆಗಿರುವ ಅಪಮಾನವು ಅತ್ಯಂತ ದುರದೃಷ್ಟಕರ ಘಟನೆ. ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುವ ಸಂವಿಧಾನವು ಕಾನೂನುಗಳನ್ನು ಪಾಲಿಸಬೇಕು ಎಂಬುದನ್ನೂ ಅಷ್ಟೇ ಬಲವಾಗಿ ಪ್ರತಿಪಾದಿಸುತ್ತದೆ’ ಎಂದರು.
ವಿರೋಧ ಪಕ್ಷಗಳಿಂದ ಬಹಿಷ್ಕಾರ
ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರಪತಿಯ ಭಾಷಣವನ್ನು ಬಹಿಷ್ಕರಿಸುವ ಮೂಲಕ 20ಕ್ಕೂ ಹೆಚ್ಚು ವಿರೋಧಪಕ್ಷಗಳು ಶುಕ್ರವಾರ ಮೊದಲ ಬಾರಿಗೆ ಇಂಥ ಪ್ರತಿಭಟನೆಯನ್ನು ದಾಖಲಿಸಿದವು. ಹೊಸವರ್ಷದ ಮೊದಲ ಅವಧಿವೇಶನದಲ್ಲೇ ಈ ಬೆಳವಣಿಗೆ ನಡೆದಿದೆ.
ಮೃತ ಗಣ್ಯರಿಗೆ ಸಂತಾಪ ಸೂಚನೆ ಮುಗಿಯುತ್ತಿದ್ದಂತೆಯೇ ಡಿಎಂಕೆ ಹಾಗೂ ಕಾಂಗ್ರೆಸ್ ಸಂಸದರು ಸಭಾಧ್ಯಕ್ಷರ ಪೀಠದ ಮುಂದೆ ಬಂದು ಘೋಷಣೆ ಕೂಗಲಾರಂಭಿಸಿದರು. ಶಿವಸೇನಾದ ಸದಸ್ಯರು ತಾವಿದ್ದ ಜಾಗದಿಂದಲೇ ಘೋಷಣೆ ಕೂಗಿದರು. ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಸದಸ್ಯರು, ಪ್ರತಿಭಟನೆಯ ಸಂದರ್ಭದಲ್ಲಿ ಮೃತಪಟ್ಟಿರುವ ರೈತರಿಗೂ ಸಂಸತ್ತು ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಸ್ವಲ್ಪ ಹೊತ್ತು ಘೋಷಣೆಗಳನ್ನು ಕೂಗಿದ ನಂತರ ವಿರೋಧಪಕ್ಷಗಳವರು ಸಭಾತ್ಯಾಗ ನಡೆಸಿದರು.
ಭಾಷಣದ ಮುಖ್ಯಾಂಶಗಳು
l 10 ಕೋಟಿಗೂ ಹೆಚ್ಚು ರೈತರಿಗೆ ಹೊಸ ಕಾಯ್ದೆಗಳ ಲಾಭ ಸಿಗಲು ಆರಂಭವಾಗಿದೆ. ವಿವಿಧ ರಾಜಕೀಯ ಪಕ್ಷಗಳು ಕಾಲಕಾಲಕ್ಕೆ ಈ ಸುಧಾರಣೆಗಳಿಗೆ ಬೆಂಬಲ ನೀಡುತ್ತಾ ಬಂದಿವೆ
l ಸಣ್ಣ ಮತ್ತು ಮಧ್ಯಮ ರೈತರನ್ನು ಬೆಂಬಲಿಸುವ ಉದ್ದೇಶದಿಂದ ಸರ್ಕಾರವು ನೇರವಾಗಿ ₹1.12 ಸಾವಿರ ಕೋಟಿಯನ್ನು ಅವರ ಖಾತೆಗಳಿಗೆ ವರ್ಗಾವಣೆ ಮಾಡಿದೆ
l ದೇಶದ ರೈತರಲ್ಲಿ ಶೇ 80ಕ್ಕೂ ಹೆಚ್ಚು ಮಂದಿ ಸಣ್ಣ ಮತ್ತು ಮಧ್ಯಮ (ಒಂದರಿಂದ ಎರಡು ಹೆಕ್ಟೇರ್ ಜಮೀನು ಹೊಂದಿದವರು) ರೈತರಿದ್ದಾರೆ. ಇಂಥವರ ಕಷ್ಟಗಳಿಗೆ ಸ್ಪಂದಿಸುವ ಕಾಲ ಈಗ ಬಂದಿದೆ
l ‘ಬೀಜದಿಂದ ಮಾರುಕಟ್ಟೆಯವರೆಗೆ’ ಎಲ್ಲಾ ಕ್ಷೇತ್ರಗಳಲ್ಲೂ ಸುಧಾರಣೆಗಳನ್ನು ಮಾಡಲು ಹಾಗೂ ರೈತರ ಉತ್ಪನ್ನಗಳಿಗೆ ಸ್ವಾಮಿನಾಥನ್ ಆಯೋಗದ ವರದಿಯಂತೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಂಬಲ ಬೆಲೆ ನೀಡಲು ಸರ್ಕಾರ ಕಳೆದ ಆರು ವರ್ಷಗಳಲ್ಲಿ
ಪ್ರಯತ್ನಗಳನ್ನು ಮಾಡಿದೆ.
***
ಅದು (ರಾಷ್ಟ್ರಪತಿಯ ಭಾಷಣ) ಶಾಸಕಾಂಗದ ಅಮೂಲ್ಯ ಸಮಯವನ್ನು ಹಾಳುಮಾಡುವ, ಸರ್ಕಾರದ ಘೋಷಿತ ಸಾಧನೆಗಳ ಪಟ್ಟಿಯಷ್ಟೇ ಆಗಿತ್ತು.
ಮನೀಶ್ ತಿವಾರಿ, ಕಾಂಗ್ರೆಸ್ ಮುಖಂಡ
***
ಯುಪಿಎ ಸರ್ಕಾರದ ಅವಧಿಯಲ್ಲಿ ಹಲವು ಹಗರಣ ಗಳು ನಡೆದಿದ್ದರೂ, ಬಿಜೆಪಿಯು ರಾಷ್ಟ್ರಪತಿಯ ಭಾಷಣವನ್ನು ಎಂದೂ ಬಹಿಷ್ಕರಿಸಿರಲಿಲ್ಲ
ರವಿಶಂಕರ ಪ್ರಸಾದ್, ಕೇಂದ್ರದ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.